ಬೀದರ್: ನಗರದ ಹಳ್ಳದಕೇರಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಸಮಗ್ರ ಜೈವಿಕ ಕೃಷಿ ಕೇಂದ್ರವು ಯಾವುದೇ ಸದ್ದಿಲ್ಲದೇ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಗಮನಾರ್ಹ ಬದಲಾವಣೆ ಮೂಲಕ ಮೌನ ಕ್ರಾಂತಿ ಮಾಡುತ್ತಿದೆ.
ಇದು ಕಲ್ಯಾಣ ಕರ್ನಾಟಕದಲ್ಲಿರುವ ಏಕೈಕ ಜೈವಿಕ ಕೃಷಿ ಕೇಂದ್ರ. ಹನ್ನೆರಡು ವರ್ಷಗಳ ಹಿಂದೆ ಇದು ಕಾರ್ಯಾರಂಭ ಮಾಡಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಬಹಳ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದು, ರೈತರಿಗೆ ವರವಾಗಿ ಪರಿಣಮಿಸಿದೆ.
ಇದರ ಸಂಶೋಧನೆಯ ಫಲಿತ ಬೀದರ್ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ನೆರೆಯ ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನೆರೆಯ ತೆಲಂಗಾಣ, ಮಹಾರಾಷ್ಟ್ರದ ರೈತರು ಹೊರತಾಗಿಲ್ಲ.
ಏನೇನು ಕೆಲಸ?; ಜೈವಿಕ ಕೃಷಿ ಕೇಂದ್ರದಲ್ಲಿ ಪ್ರಮುಖವಾಗಿ ನಾಲ್ಕು ವಿಭಾಗಗಳಿವೆ. ಸಸ್ಯ ಪೋಷಕಾಂಶ ಪ್ರಯೋಗಾಲಯ, ಜೈವಿಕ ನಿಯಂತ್ರಣ ಪ್ರಯೋಗಾಲಯ, ಅಂಗಾಂಶ ಕೃಷಿ ವಿಭಾಗ ಹಾಗೂ ಅಣಬೆ ಪ್ರಯೋಗಾಲಯ ಇದೆ.
ಸಸ್ಯ ಪೋಷಕಾಂಶ ಪ್ರಯೋಗಾಲಯದಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿ, ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂದು ರೈತರಿಗೆ ಸಲಹೆ ಮಾಡಲಾಗುತ್ತದೆ. ಈ ಪರೀಕ್ಷೆಗೆ ಈ ಕೇಂದ್ರದಲ್ಲಿ ₹65 ನಿಗದಿಪಡಿಸಲಾಗಿದೆ. ಇದೇ ಪರೀಕ್ಷೆ ಖಾಸಗಿಯಲ್ಲಿ ಮಾಡಿಸಿದರೆ ₹400ರಿಂದ ₹500 ಪಾವತಿಸಬೇಕಾಗುತ್ತದೆ.
ಜೈವಿಕ ನಿಯಂತ್ರಣ ಪ್ರಯೋಗಾಲಯದಲ್ಲಿ ‘ಟ್ರೈಕೋಡರ್ಮಾ’ ಮತ್ತು ‘ಸುಡೊಮೋನಸ್’ ಸಿದ್ಧಪಡಿಸಲಾಗುತ್ತದೆ. ರೈತರ ಬೇಡಿಕೆಗೆ ತಕ್ಕಂತೆ ಇದನ್ನು ಪೂರೈಸುತ್ತಾರೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಈ ಎರಡನ್ನೂ ಸಿಂಪಡಿಸುವುದರಿಂದ ಬೆಳೆಗಳಿಗೆ ರೋಗ ಬರುವುದಿಲ್ಲ. ಫಲವತ್ತತೆ ಹೆಚ್ಚಾಗುತ್ತದೆ.
ಈಗಾಗಲೇ ಮಾವು, ನಿಂಬೆ, ಮೆಣಸಿನಕಾಯಿ, ಸೀಬೆ ಹಣ್ಣು, ದ್ರಾಕ್ಷಿ, ಪಪ್ಪಾಯಿ, ಟೊಮೆಟೊ, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಸೋಯಾ, ಕಬ್ಬು ಸೇರಿದಂತೆ ಇತರೆ ಬೆಳೆಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ. ರೈತರ ಆದಾಯದಲ್ಲೂ ವೃದ್ಧಿಯಾಗಿದೆ. ಈ ವಿಷಯ ರೈತರಿಂದ ರೈತರಿಗೆ ತಿಳಿದು, ‘ಟ್ರೈಕೋಡರ್ಮಾ’ ಮತ್ತು ‘ಸುಡೊಮೋನಸ್’ಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಇದನ್ನು ಪ್ರತಿ ಕೆಜಿ ₹80ಕ್ಕೆ ಮಾರಾಟ ಮಾಡಲಾಗುತ್ತದೆ. ಖಾಸಗಿಯಲ್ಲಿ ಪ್ರತಿ ಕೆಜಿಗೆ ₹350ರಿಂದ ₹400 ಇದೆ.
ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ಸಂಶೋಧನೆಗೆ ಕಳೆದ ವರ್ಷವಷ್ಟೇ ಅನುಮತಿ ಸಿಕ್ಕಿದ್ದು, ಈ ವರ್ಷ ‘ಡಾರ್ಕ್ ರೂಮ್’ನಲ್ಲಿ ಸಂಶೋಧನಾ ಪ್ರಯೋಗಗಳು ಆರಂಭಗೊಂಡಿವೆ. ಇನ್ನು, ಅಣಬೆ ಪ್ರಯೋಗಾಲಯದಲ್ಲಿ ಅಣಬೆ ಬೆಳೆಸುವ ವಿಧಾನಗಳನ್ನು ರೈತರಿಗೆ ಉಚಿತವಾಗಿ ತಿಳಿಸಿಕೊಡಲಾಗುತ್ತಿದೆ. ಅದರ ಮಾದರಿಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಆದರೆ, ಸ್ಥಳೀಯವಾಗಿ ಅಣಬೆಗೆ ಹೆಚ್ಚಿನ ಬೇಡಿಕೆ ಇಲ್ಲ. ರೈತರು ಇದನ್ನು ಬೆಳೆಸಲು ನಿರಾಸಕ್ತಿ ತೋರಿಸುತ್ತಿದ್ದಾರೆ.
ಐದು ಎಕರೆಯಲ್ಲಿ ಹರಡಿಕೊಂಡಿರುವ ಕೇಂದ್ರದಲ್ಲಿ ನಾಲ್ಕೂ ವಿಭಾಗಗಳಿಗೆ ಪ್ರತ್ಯೇಕ ಸೌಕರ್ಯಗಳಿವೆ. ಅತ್ಯಾಧುನಿಕ ಪ್ರಯೋಗಾಲಯದ ಯಂತ್ರಗಳನ್ನು ಒದಗಿಸಲಾಗಿದೆ. ಕೇಂದ್ರದ ಆವರಣದಲ್ಲಿ ‘ಕ್ರಾಪ್ ಹಾರ್ಡನಿಂಗ್’ಗೂ (ಬೆಳೆ ಗಡುಸುವಿಕೆ) ವ್ಯವಸ್ಥೆ ಇದೆ. ದೇಶದ ವಿವಿಧ ಲ್ಯಾಬ್‌ಗಳಲ್ಲಿ ತಯಾರಾಗುವ ಸಸಿಗಳನ್ನು ನೆರಳಿನ ಪರದೆಯಲ್ಲಿ ಒಂದರಿಂದ ಎರಡು ತಿಂಗಳ ವರೆಗೆ ಇಡಲಾಗುತ್ತದೆ. ಸ್ಥಳೀಯ ಮಣ್ಣಿಗೆ ಹೊಂದಿಕೊಂಡ ನಂತರ ಅತಿ ಕಡಿಮೆ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ.
‘ಜೈವಿಕ ಕೃಷಿ ಕೇಂದ್ರದಲ್ಲಿ ರೈತರಿಗೆ ಬೇಕಾದ ಅಗತ್ಯ ಸಲಹೆಗಳನ್ನು ನೀಡುತ್ತಾರೆ. ಯಾವುದೇ ರಾಸಾಯನಿಕಗಳಿಲ್ಲದೇ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ. ಅತಿ ಕಡಿಮೆ ಬೆಲೆಗೆ ಬೆಳೆ ಪೋಷಕಾಂಶ, ಸಸಿಗಳನ್ನು ಮಾರಾಟ ಮಾಡುತ್ತಿದ್ದಾರೆ. ನಿಜಕ್ಕೂ ಇದು ರೈತರಿಗೆ ವರದಾನವಾಗಿದೆ’ ಎಂದು ಬುಧೇರಾ ರೈತ ಓಂಕಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಜೈವಿಕ ಕೃಷಿ ಕೇಂದ್ರದಿಂದ ಕಳೆದ ಎರಡು ವರ್ಷಗಳಲ್ಲಿ ₹50 ಲಕ್ಷ ಆದಾಯ ಬಂದಿದೆ. 10 ಜನ ಸಿಬ್ಬಂದಿಯೊಂದಿಗೆ ಉತ್ತಮವಾಗಿ ಕೇಂದ್ರ ನಡೆಸಿಕೊಂಡು ಹೋಗಲಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ನೇಮಿಸಿದರೆ ಆದಾಯ ಇನ್ನಷ್ಟು ಹೆಚ್ಚಾಗಬಹುದು.–ನೀಲಾಂಜನ್, ಸಹಾಯಕ ನಿರ್ದೇಶಕತೋಟಗಾರಿಕೆ ಜೈವಿಕ ಕೇಂದ್ರ
ಜೈವಿಕ ಕೃಷಿ ಕೇಂದ್ರದಿಂದ ರೈತರಿಗೆ ಬಹಳಷ್ಟು ಪ್ರಯೋಜನಗಳಿವೆ. ನನಗೆ ಮೊದಲು ಅದರ ಬಗ್ಗೆ ಗೊತ್ತಿರಲಿಲ್ಲ. ಅಲ್ಲಿಗೆ ಹೋದ ನಂತರ ವಿಷಯ ಗೊತ್ತಾಯಿತು. ಈಗ ಏನೇ ಬೆಳೆದರೂ ಅವರ ಸಲಹೆ ಪಡೆದು ಬೆಳೆಸುತ್ತೇನೆ.–ಪ್ರಶಾಂತ್ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.