ADVERTISEMENT

ಪೆಂಕಾಕ್ ಕ್ರೀಡೆಯಲ್ಲಿ ಅಪೂರ್ವ ಸಾಧನೆ

4 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ ಗೆದ್ದ ವಿದ್ಯಾರ್ಥಿನಿಯರು

ಮನ್ನಥಪ್ಪ ಸ್ವಾಮಿ
Published 3 ಜುಲೈ 2022, 2:18 IST
Last Updated 3 ಜುಲೈ 2022, 2:18 IST
ಪೆಂಕಾಕ್ ಸಿಲಾತ್ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದ ವಿದ್ಯಾರ್ಥಿನಿಯರನ್ನು ಈಚೆಗೆ ಔರಾದ್ ವಸತಿ ನಿಲಯದಲ್ಲಿ ಗೌರವಿಸಲಾಯಿತು
ಪೆಂಕಾಕ್ ಸಿಲಾತ್ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದ ವಿದ್ಯಾರ್ಥಿನಿಯರನ್ನು ಈಚೆಗೆ ಔರಾದ್ ವಸತಿ ನಿಲಯದಲ್ಲಿ ಗೌರವಿಸಲಾಯಿತು   

ಔರಾದ್: ಇಲ್ಲಿಯ ಡಿ. ದೇವರಾಜ್ ಅರಸ್ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿನಿಯರು ರಾಜ್ಯ ಮಟ್ಟದ ಪೆಂಕಾಕ್ ಸಿಲಾತ್ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ ಕಂಚು ಸೇರಿ ಒಟ್ಟು ಏಳು ಪದಕ ಪಡೆದು ಅದ್ಭುತ ಪ್ರತಿಭೆ ಮೆರೆದಿದ್ದಾರೆ.

ಈಚೆಗೆ ಶಿವಮೊಗ್ಗದಲ್ಲಿ ಪೆಂಕಾಕ್ ಸಿಲಾತ್ ಸ್ಪೋಟ್ಸ್ರ ಸಂಸ್ಥೆ ಆಯೋಜಿಸಿದ ರಾಜ್ಯ ಮಟ್ಟದ ಪೆಂಕಾಕ್ ಸಿಲಾತ್ ಕ್ರೀಡಾಕೂಟದಲ್ಲಿ ಅಂಜಲಿ ವಿಜಯಕುಮಾರ ಎರಡು ಚಿನ್ನ, ಸುಪ್ರಿಯಾ ಸಂಜು ರಾಠೋಡ್ ಒಂದು ಚಿನ್ನ, ಒಂದು ಬೆಳ್ಳಿ, ಸುಪ್ರಿಯಾ ಬಾಬು ಒಂದು ಚಿನ್ನ, ಶಿಲ್ಪಾ ಉತ್ತಮರಾವ ಒಂದು ಕಂಚು ಹಾಗೂ ಪೂಜಾ ರಾಮರಾವ 1 ಬೆಳ್ಳಿ ಪದಕ ಪಡೆದಿದ್ದಾರೆ.

‘ಪೆಂಕಾಕ್ ಸಿಲಾತ್ ಕರಾಟೆ ಮಾದರಿ ಕ್ರೀಡಾಕೂಟ ಆಗಿದೆ. ಇದಕ್ಕೆ ಸಮರಸ ಕಲೆ ಎಂತಲೂ ಕರೆಯುತ್ತಾರೆ. ನಮ್ಮ ವಸತಿ ನಿಲಯ ವಿದ್ಯಾರ್ಥಿನಿಯರು ಇದರಲ್ಲಿ ಹೆಚ್ಚು ಪಳಗಿದ್ದಾರೆ. ಈ ಕಾರಣ ರಾಜ್ಯ ಮಟ್ಟದಲ್ಲಿ ಏಳು ಪದಕ ಪಡೆದು ಈಗ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಆಡಲು ಅರ್ಹತೆ ಹೊಂದಿದ್ದಾರೆ’ ಎಂದು ಇಲ್ಲಿಯ ವಸತಿ ಶಾಲೆ ಕರಾಟೆ ಶಿಕ್ಷಕಿ ವೈಷ್ಣವಿ ರಾಠೋಡ್ ತಿಳಿಸಿದರು.

ADVERTISEMENT

‘ಪೆಂಕಾಕ್ ಸಿಲಾತ್ ಇದು ಮಹಿಳೆಯರಿಗೆ ಹೇಳಿ ಮಾಡಿಸಿದ ಕಲೆ. ಸ್ವಯಂ ರಕ್ಷಣೆ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಈ ಕಲೆ ಅತ್ಯುತ್ತಮ. ಈ ಕಲೆಯಲ್ಲಿ ಪರಿಣತಿ ಪಡೆದವರಿಗೆ ಪೊಲೀಸ್, ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ನೌಕರಿಯೂ ಸಿಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಸರ್ಕಾರ ಯುವತಿಯರಿಗೆ ಸ್ವಯಂ ರಕ್ಷಣೆ ಕಲೆ ತರಬೇತಿ ನೀಡಲು ಆದೇಶ ಮಾಡಿದೆ. ಹೀಗಾಗಿ ಕಳೆದ ಜನೆವರಿ ತಿಂಗಳಿನಿಂದ ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪೆಂಕಾಕ್ ಸಿಲಾತ್ ಕಲೆ ಕಲಿಸಿ ಕೊಡಲಾಗುತ್ತಿದೆ. ವಾರಕ್ಕೆ 2 ದಿನ ಕಡ್ಡಾಯ ಮಾಡಲಾಗಿದೆ. ನಮ್ಮ ವಸತಿ ನಿಲಯದ ವಿದ್ಯಾರ್ಥಿನಿಯರು ಆರು ತಿಂಗಳಲ್ಲೇ ಈ ಕಲೆಯಲ್ಲಿ ಪರಿಣತಿ ಪಡೆದು ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿದ್ದು ‌ಖುಷಿಯಾಗಿದೆ’ ಎಂದು ಹಿಂದುಳಿದ ವರ್ಗಗಳ ತಾಲ್ಲೂಕು ಕಲ್ಯಾಣಾಧಿಕಾರಿ ಸಂಗೀತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.