ADVERTISEMENT

ನಿಸ್ವಾರ್ಥ ಸೇವೆಯಿಂದ ಪರಿಪೂರ್ಣ ಜೀವನ

ರೋಟರಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಸಿ ರಾಮಚಂದ್ರನ್ ಆರ್. ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 15:13 IST
Last Updated 4 ಜುಲೈ 2020, 15:13 IST
ಬೀದರ್‌ನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚೂರಿ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಜಂಟಿಯಾಗಿ ದೀಪ ಬೆಳಗಿಸಿದರು
ಬೀದರ್‌ನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚೂರಿ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಜಂಟಿಯಾಗಿ ದೀಪ ಬೆಳಗಿಸಿದರು   

ಬೀದರ್: ‘ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಭಾವದಿಂದ ಮಾಡುವ ಕಾರ್ಯ ಪೂಜ್ಯನೀಯವಾಗಿರುವುದಲ್ಲದೆ ಪರಿಪೂರ್ಣ ಜೀವನ ರೂಪಿಸುತ್ತದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಭಿಪ್ರಾಯಪಟ್ಟರು.

ನಗರದ ಪಾಪನಾಶ ದೇವಸ್ಥಾನದ ಶಿವಾ ರೆಸ್ಟೋರೆಂಟ್ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚೂರಿ ವತಿಯಿಂದ ನಡೆದ 2020-21ನೇ ಸಾಲಿಗೆ ಆಯ್ಕೆಯಾದ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಾಲೇಜು ಜೀವನದಲ್ಲಿ ರೋಟ್ರಾಕ್ಟ್‌ನಲ್ಲಿ ಪದಾಧಿಕಾರಿಯಾಗಿದ್ದೆ, ಆಗ ಮದ್ರಾಸ್‌ನಲ್ಲಿ ಪ್ಲಾಸ್ಟಿಕ್ ನಿಷೇಧ, ಬಡ ವಿದ್ಯಾರ್ಥಿಗಳಿಗೆ ಮನೆಪಾಠ, ನಿರ್ಗತಿಕರಿಗೆ ಸಹಾಯ, ಸಹಕಾರ ನೀಡುವುದು ಸೇರಿದಂತೆ ಹತ್ತು ಹಲವು ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದ್ದೆ’ ಎಂದು ಸ್ಮರಿಸಿಕೊಂಡರು.

‘ಇಂದು ರೋಟರಿ ಕ್ಲಬ್ ಮಾಡುತ್ತಿರುವ ವಿವಿಧ ಚಟುವಟಿಕೆಗಳು ಸಮಾಜದ ಎಲ್ಲ ವರ್ಗದವರಿಗೂ ಮಾದರಿಯಾಗಿದೆ. ಉಳ್ಳುವವರು ತಮ್ಮಲ್ಲಿರುವ ಧನ ಸಂಪತ್ತನ್ನು ಇಲ್ಲದವರೊಂದಿಗೆ ಹಂಚಿಕೊಂಡಲ್ಲಿ ನಿಜವಾದ ತೃಪ್ತಿ ದೊರೆಯಲಿದೆ’ ಎಂದು ಹೇಳಿದರು.

ADVERTISEMENT

‘ಯೋಜನಾಬದ್ಧ ಹಾಗೂ ಪರಿಶ್ರಮ ಯುಕ್ತ ಸೇವಾಭಾವ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದಲ್ಲದೆ ಇತರರಿಗೂ ಅದು ಸ್ಫೂರ್ತಿ ಹಾಗೂ ಶಕ್ತಿ ತುಂಬುತ್ತದೆ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್‌ನ ನಿಸ್ವಾರ್ಥ ಕಾರ್ಯಗಳಿಗೆ ಜಿಲ್ಲಾಡಳಿತ ಸದಾ ಸಹಕಾರ ನೀಡಲಿದೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ‘ಇಂದು ಕೋವಿಡ್-19 ಸೋಂಕಿನ ಭಯವೇ ನಮ್ಮನ್ನು ನಿಯಂತ್ರಿಸಿದೆ. ಮತ್ತೊಮ್ಮೆ ಪ್ರೀತಿ, ಪ್ರೇಮ, ಭ್ರಾತೃತ್ವ, ಸಹಕಾರ ಮನೋಭಾವ ಜಾಗೃತವಾಗಿ ಸಹಜ ಜೀವನ ನಡೆಸಲು ಪ್ರೇರೇಪಿಸಿದೆ’ ಎಂದರು.

‘ಮನುಷ್ಯನಲ್ಲಿ ಶಾಂತಿ, ಸುಖ, ನೆಮ್ಮದಿ ಉದ್ಭವವಾಗಲು ಅಧ್ಯಾತ್ಮ ಹಾಗೂ ಯೋಗ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾತ್ವಿಕ ಆಹಾರ ಸೇವಿಸಬೇಕು. ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರೋಟರಿ ಕ್ಲಬ್ ಆಫ್ ನ್ಯೂ ಸೆಂಚೂರಿಯ ನೂತನ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ನಗರಸಭೆ ಪೌರಾಯುಕ್ತ ಬಿ.ಬಸಪ್ಪ, ಪಿ.ಡಿ.ಜಿ ಕೆ.ಸಿ ಸೇನನ್, ನಿಕಟಪೂರ್ವ ಅಧ್ಯಕ್ಷೆ ಡಾ.ಶ್ವೇತಾ ಮೇಗೂರ್, ಪದಾಧಿಕಾರಿಗಳಾದ ಸುಮೀತ ಸಿಂದೋಲ್, ಸಂಜಯ ಹತ್ತಿ ಹಾಗೂ ನಿತಿನ್ ಕರ್ಪೂರ ಇದ್ದರು.

ಅಣವಿ ಮಡಕಿ ಸ್ವಾಗತ ಗೀತೆ ಹಾಡಿದರು. ಕ್ಲಬ್‌ನ ನಿಕಟಪೂರ್ವ ಕಾರ್ಯದರ್ಶಿ ಡಾ.ನಿತೇಶಕುಮಾರ ಬಿರಾದಾರ ವಾರ್ಷಿಕ ವರದಿ ಮಂಡಿಸಿದರು. ಡಾ.ಜಗದೀಶ ಪಾಟೀಲ ಸ್ವಾಗತಿಸಿದರು. ಡಾ.ರಘು ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಡಾ.ಕಪಿಲ್ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.