ADVERTISEMENT

ನಿರ್ಣಾದಲ್ಲಿ ಹಂದಿಗಳ ಸಾವು: ಆತಂಕ

ಗ್ರಾಮಸ್ಥರ ನೆಮ್ಮದಿ ಕೆಡಿಸಿದ ಹಂದಿ ಜ್ವರ ಭೀತಿ: ಸೂಕ್ತ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 10:49 IST
Last Updated 26 ಜುಲೈ 2020, 10:49 IST
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ರಸ್ತೆ ಮೇಲೆ ಹಂದಿಯೊಂದು ಮೃತಪಟ್ಟಿರುವುದು
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ರಸ್ತೆ ಮೇಲೆ ಹಂದಿಯೊಂದು ಮೃತಪಟ್ಟಿರುವುದು   

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಎರಡು ವಾರಗಳಿಂದ ಹಂದಿಗಳು ನಿರಂತರವಾಗಿ ಸಾವನ್ನಪ್ಪುತ್ತಿವೆ. ಗ್ರಾಮಸ್ಥರಿಗೆ ಹಂದಿ ಜ್ವರ ಭೀತಿ ಎದುರಾಗಿದೆ.

ಗ್ರಾಮದ ಮುತ್ತಂಗಿ ರಸ್ತೆ, ಬಸ್ ನಿಲ್ದಾಣ, ಕ್ರಿಶ್ಚಿಯನ್‌, ಒಡ್ಡರ ಓಣಿ ಸೇರಿ ಹಲವು ಪ್ರದೇಶಗಳಲ್ಲಿ ಹಂದಿಗಳು ಸಾವನ್ನಪ್ಪುತ್ತಿವೆ.

15 ದಿನಗಳ ಅವಧಿಯಲ್ಲಿ 250ಕ್ಕೂ ಹೆಚ್ಚು ಹಂದಿಗಳು ಸತ್ತಿವೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಎರಡು ಮೂರು ದಿನಗಳ ಅವಧಿಯಲ್ಲೇ ಗ್ರಾಮದ ವಿವಿಧೆಡೆ 150 ಕ್ಕೂ ಹೆಚ್ಚು ಹಂದಿಗಳು ಸತ್ತಿವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ADVERTISEMENT

‘ಕೆಲ ದಿನಗಳ ಹಿಂದೆ ಅಲ್ಲೊಂದು, ಇಲ್ಲೊಂದು ಹಂದಿ ಮೃತಪಡುತ್ತಿತ್ತು. ಗಂಭೀರವಾಗಿ ಪರಿಗಣಿಸಲಿಲ್ಲ. ದಿನ ಕಳೆದಂತೆ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಇದರಿಂದ ಮಕ್ಕಳು, ವೃದ್ಧರು ರಸ್ತೆಗಳಲ್ಲಿ ಸಂಚರಿಸುವುದು ಕಷ್ಟವಾಗಿದೆ’ ಎಂದು ಗ್ರಾಮದ ಮಾರುತಿ ತಿಳಿಸುತ್ತಾರೆ.

‘ಗ್ರಾಮದ ರಸ್ತೆಗಳ ಮೇಲೆ ಹಂದಿಗಳು ಸಾವನ್ನಪ್ಪುತ್ತಿರುವುದರಿಂದ ಕಳೆಬರ ದುರ್ವಾಸನೆ ಬೀರುತ್ತದೆ. ಅದು ಸುತ್ತಲಿನ ಮನೆಗಳಿಗೂ ಹರಡುತ್ತಿದೆ. ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಹಂದಿ ಜ್ವರ ಸಮುದಾಯಕ್ಕೆ ಹರಡುವ ಭೀತಿ ಹೆಚ್ಚಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಾಗರಿಕರ ಆರೋಗ್ಯ ರಕ್ಷಣೆ ಮಾಡಬೇಕು’ ಎಂದು ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷ ಭರತ್ ಶೆಟ್ಟಿ ಹಳ್ಳಿಖೇಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರರಾವ್ ಪಾಟೀಲ, ಗಣ್ಯರಾದ ಶ್ರೀನಿವಾಸ್ ಪತ್ತಾರ್‍, ಕನ್ನಡ ಸೇನೆ ರಾಜ್ಯ ಸಂಚಾಲಕ ರವಿ ಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗನ್ನಾಥ ರೆಡ್ಡಿ ಏಖ್ಖೇಳಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.