ADVERTISEMENT

₹ 20 ಕೋಟಿ ವೆಚ್ಚದಲ್ಲಿ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ: ಇಂಧನ ಸಚಿವ

ಇಂಧನ ಸಚಿವ ವಿ. ಸುನೀಲ್‌ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 14:29 IST
Last Updated 4 ಜೂನ್ 2022, 14:29 IST
ಬೀದರ್‌ನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್ ಮಾತನಾಡಿದರು. ಶೈಲೇಂದ್ರ ಬೆಲ್ದಾಳೆ, ಶಿವಾನಂದ ಮಂಠಾಳಕರ್, ಪ್ರಕಾಶ ಖಂಡ್ರೆ ಇದ್ದಾರೆ
ಬೀದರ್‌ನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್ ಮಾತನಾಡಿದರು. ಶೈಲೇಂದ್ರ ಬೆಲ್ದಾಳೆ, ಶಿವಾನಂದ ಮಂಠಾಳಕರ್, ಪ್ರಕಾಶ ಖಂಡ್ರೆ ಇದ್ದಾರೆ   

ಬೀದರ್‌: ಹೆಸ್ಕಾಂ ಹಾಗೂ ಜೆಸ್ಕಾಂ ವಿಭಾಗದಲ್ಲಿ ವಿದ್ಯುತ್‌ ರಹಿತ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಒಟ್ಟು ₹ 20 ಕೋಟಿ ವೆಚ್ಚದಲ್ಲಿ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಬೆಳಕು ಯೋಜನೆ ಅಡಿಯಲ್ಲಿ ವಿದ್ಯುತ್‌ ರಹಿತ ಮನೆಗಳಿಗೆ ಉಚಿತ ಸಂಪರ್ಕ ಕೊಡಲಾಗುವುದು. ನಂತರ ಗ್ರಾಹಕರು ನಿಯಮಿತವಾಗಿ ವಿದ್ಯುತ್‌ ಕಂಪನಿಗಳಿಗೆ ಬಿಲ್‌ ಪಾವತಿಸಬೇಕಾಗಲಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ವಿದ್ಯುತ್‌ ಸರಬರಾಜು ಹೆಚ್ಚಿಸಲು 9 ಕಡೆ ಸಬ್‌ ಸ್ಟೇಷನ್ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಔರಾದ್, ಸಂತಪುರ, ಮನ್ನಳ್ಳಿಯಲ್ಲಿ ಸಬ್‌ ಸ್ಟೇಷನ್‌ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದರು.

ಜೆಸ್ಕಾಂ ಬೀದರ್‌ ಉಪ ವಿಭಾಗವನ್ನು ಎರಡು ವಿಭಾಗ ಮಾಡಬೇಕು ಎನ್ನುವ ಬೇಡಿಕೆ ಇದೆ. ಹೊಸ ವಿಭಾಗ ಮಾಡಿದರೆ ಹೆಚ್ಚುವರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯವಿದೆ. ಇದಕ್ಕಾಗಿ ಹಣಕಾಸು ಇಲಾಖೆಯಿಂದ ಅನುಮತಿ ಕೇಳಲಾಗಿದೆ ಎಂದು ತಿಳಿಸಿದರು.

ಕಲಬುರ್ಗಿಯಲ್ಲಿ 500 ಎಕರೆ ಪ್ರದೇಶದಲ್ಲಿ 100 ಮೆಗಾ ವಾಟ್‌ ಸಾಮರ್ಥ್ಯದ ಸೋಲಾರ್ ಪಾರ್ಕ್‌ ನಿರ್ಮಾಣ ಮಾಡಲಾಗುವುದು. ಈಗಾಗಲೇ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದರು.

24 ಗಂಟೆಯೊಳಗೆ ಟಿಸಿ ದುರಸ್ತಿಗೊಳಿಸುವ ಕಾರ್ಯಕ್ಕೆ ನೂರಕ್ಕೆ ನೂರರಷ್ಟು ಯಶ ದೊರಕಿಲ್ಲ. ಆದರೆ, ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಲಾಗಿದೆ. 48 ಗಂಟೆಯಲ್ಲಿ ಟಿಸಿ ದುರಸ್ತಿ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ಟಿಸಿ ಬ್ಯಾಂಕ್‌, ಟಿಸಿ ರಿಪೇರಿ ಸೆಂಟರ್ ಮಾಡಲಾಗುತ್ತಿದೆ. ಇಲಾಖೆ ಅಡಳಿತ ಚುರುಕುಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಹೈಬ್ರಿಡ್ ಪಾರ್ಕ್

ಸೌರ, ಜಲ ಹಾಗೂ ಪವನ ಶಕ್ತಿ ಮೂಲಕ ರಾಜ್ಯದಲ್ಲಿ ಹಸಿರು ವಿದ್ಯುತ್‌ ಉತ್ಪಾದನೆ ಮಾಡಲು ಎಂಟು ಕಡೆ ಹೈಬ್ರಿಡ್ ಪಾರ್ಕ್‌ ಸ್ಥಾಪನೆ ಮಾಡಲಾಗುವುದು. ಈ ಮೂ;ಕ ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆಗೆ ಆದ್ಯತೆ ನೀಡಲಾಗುವುದು. ಈಗಾಲೇ ಡಿಪಿಆರ್‌ ತಯಾರಿಸಲಾಗುತ್ತಿದೆ. ಎರಡು ತಿಂಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು.

ರಥ ಯಾತ್ರೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮೊದಲ ಹಂತದಲ್ಲಿ ‘ಅಮೃತ ಭಾರತಿಗೆ ಕನ್ನಡದ ಆರತಿ’ ಶೀರ್ಷಿಕೆಯಡಿ ರಾಜ್ಯದ 75 ಸ್ಥಳಗಳಲ್ಲಿ ಏಕಕಾಲದಲ್ಲಿ ಅಭಿಯಾನ ನಡೆದಿದೆ. ಎರಡನೇ ಹಂತದಲ್ಲಿ ಜುಲೈ 1ರಿಂದ 15ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಆಗಸ್ಟ್ 1ರಿಂದ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ರಥ ಯಾತ್ರೆ ಮಾಡಲಾಗುವುದು. ಅಮೃತ ಮಹೋತ್ಸವಕ್ಕೆ ಕರ್ನಾಟಕದ ಕೊಡುಗೆಯ ಕುರಿತು ಜಾಗೃತಿ ಮೂಡಿಸಲಾಗುವುದು. ದೇಶ ಭಕ್ತಿ ವಾತಾವರಣ ನಿರ್ಮಾಣ ಮಾಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ದಿಸೆಯಲ್ಲಿ ಆಗಸ್ಟ್‌ 9ರಂದು ರಾಜ್ಯದಲ್ಲಿ ಎಲ್ಲ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುವುದು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಮನೆಗಳ ಮೇಲೆ ಧ್ವಜ ಹಾರಿಸಲು ಕೇಂದ್ರದಿಂದ ಅನುಮತಿ ಪಡೆಯಲಾಗಿದೆ ಎಂದು ಹೇಳಿದರು.

ಕಲಾವಿದರ ಮಾಸಾಶನ ಹೆಚ್ಚಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.