ADVERTISEMENT

ಔರಾದ್‌ | ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿ ಕಂಡು ಪ್ರಭು ಚವ್ಹಾಣ್‌ ಬೇಸರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 15:35 IST
Last Updated 17 ಸೆಪ್ಟೆಂಬರ್ 2023, 15:35 IST
ಔರಾದ್ ತಾಲ್ಲೂಕು ಆಡಳಿತ ಭಾನುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಶಾಸಕ ಪ್ರಭು ಚವಾಣ್ ಅವರು ಮಹೇಶಕುಮಾರ, ನಿವೃತ್ತ ಶಿಕ್ಷಕ ರಮೇಶ ಪಾಂಚಾಳ ಅವರನ್ನು ಗೌರವಿಸಿದರು
ಔರಾದ್ ತಾಲ್ಲೂಕು ಆಡಳಿತ ಭಾನುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಶಾಸಕ ಪ್ರಭು ಚವಾಣ್ ಅವರು ಮಹೇಶಕುಮಾರ, ನಿವೃತ್ತ ಶಿಕ್ಷಕ ರಮೇಶ ಪಾಂಚಾಳ ಅವರನ್ನು ಗೌರವಿಸಿದರು   

ಔರಾದ್: ಇಂದು ನಮಗೆ ಸ್ವಾತಂತ್ರ್ಯ ಸಿಕ್ಕ ದಿನ. ಅತ್ಯಂತ ಸಂಭ್ರಮದಿಂದ ಆಚರಿಸಬೇಕು. ಆದರೆ ಎಲ್ಲವೂ ನೀರಸವಾಗಿದೆ. ಕುರ್ಚಿಗಳು ಖಾಲಿಯಿವೆ, ಅಧಿಕಾರಿಗಳಿಲ್ಲ, ಶಾಲಾ–ಕಾಲೇಜು ವಿದ್ಯಾರ್ಥಿಗಳಿಲ್ಲ, ಊರಿನ ಹಿರಿಯರಿಗೆ ಆಹ್ವಾನವಿಲ್ಲ. ಸಂಭ್ರಮವಿಲ್ಲದ ಇದೆಂತಹ ಕಾರ್ಯಕ್ರಮ? ಎಂದು ಶಾಸಕ ಪ್ರಭು ಚವ್ಹಾಣ್‌ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಭಾನುವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಯಾರು ಇಲ್ಲದ್ದನ್ನು ಕಂಡು ಕೆರಳಿ, ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಹಾಗೂ ತಾ.ಪಂ ಇಒ ಬೀರೇಂದ್ರ ಸಿಂಗ್ ಠಾಕೂರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮಕ್ಕೆ ಗೈರಾದ ನೌಕರರು, ಅಧಿಕಾರಿಗಳಿಗೆ ನೋಟಿಸ್ ನೀಡಿ, ಅವರ ವಿರುದ್ಧ ಕ್ರಮ ಜರುಗಿಸಬೇಕು. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ADVERTISEMENT

ಕಲ್ಯಾಣ ಕರ್ನಾಟ ವಿಮೋಚನೆಯಾಗಲು ಈ ಭಾಗದ ಅನೇಕರು ತಮ್ಮ ಬಲಿದಾನ ನೀಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜತೆಗೆ ಅವರ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಹೇಳಿದರು.

ಉಪನ್ಯಾಸಕ ಮಹೇಶಕುಮಾರ ಮಾತನಾಡಿದರು.

ವಿಶ್ವಕರ್ಮ ಜಯಂತಿ: ಅದೇ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ನಿವೃತ್ತ ಶಿಕ್ಷಕ ರಮೇಶ ಪಾಂಚಾಳ ಕಾರ್ಯಕ್ರಮದಲ್ಲಿ ಮಾತನಾಡಿದರು. ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ತಾ.ಪಂ. ಇಒ ಬೀರೇಂದ್ರಸಿಂಗ್ ಠಾಕೂರ, ಎಪಿಎಂಸಿ ಅಧ್ಯಕ್ಷ ಧೋಂಡಿಬಾ ನರೋಟೆ, ಕಸಾಪ ತಾಲ್ಲೂಕು ಅಧ್ಯಕ್ಷ ಶಾಲಿವಾನ ಉದಗಿರೆ, ಬಿಇಒ ಮಹಮ್ಮದ ಮಕ್ಸೂದ್, ಸಿಪಿಐ ರಘುವೀರ ಸಿಂಗ್ ಠಾಕೂರ, ವಿಶ್ವಕರ್ಮ ಸಮಾಜದ ಬಾಬುರಾವ ಸುವರ್ಣಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.