
ಕಮಲನಗರ: ‘ಪಟ್ಟಣದ ಖತಗಾಂವ ರಸ್ತೆಯಲ್ಲಿ ₹ 2.36 ಎಕರೆ ಭೂಮಿಯಲ್ಲಿ ಕಂದಾಯ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ₹ 8.60 ಕೋಟಿ ಬಿಡುಗಡೆಯಾಗಿದ್ದು, ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಖತಗಾಂವ ರಸ್ತೆಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಚನ್ನಬಸವ ಪಟ್ಟದ್ದೇವರ ಜನ್ಮಭೂಮಿ ಕಮಲನಗರ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಕಮಲನಗರ ಹಾಗೂ ಔರಾದ್ ತಾಲ್ಲೂಕುಗಳ ಜತೆ ನಮ್ಮ ಪರಿವಾರದ ಅವಿನಾಭಾವ ಸಂಬಂಧ ಹೊಂದಿದೆ. ಹೀಗಾಗಿ ಕಮಲನಗರ ತಾಲ್ಲೂಕು ಘೋಷಣೆಗೆ ಹೆಚ್ಚು ಮುತುರ್ವಜಿ ವಹಿಸಿ 2018ರಲ್ಲಿ ನಾನು ಸಚಿವನಾಗಿದ್ದಾಗ ಕಮಲನಗರ ಅಧಿಕೃತ ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡಿದ್ದೇನೆ. ಆದರೆ ಅನುದಾನದ ಕೊರೆತಯಿಂದ ಮೂಲಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಕೆಆರ್‌ಡಿಬಿಗೆ ಹೆಚ್ಚು ಅನುದಾನ ನೀಡಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಲಾಯಿತ್ತು. ಕಮಲನಗರ, ಹುಲಸೂರ ಹಾಗೂ ಚಿಟ್ಟಗುಪ್ಪ ತಾಲ್ಲೂಕುಗಳಲ್ಲಿ ಆಡಳಿತ ಭವನಗಳ ಅಗತ್ಯವನ್ನು ಮನಗಂಡು, ಈ ಕುರಿತು ನಾನು ಸಚಿವ ಸಂಪುಟದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಕಂದಾಯ ಸಚಿವರೊಂದಿಗೆ ಚರ್ಚಿಸಿ ಈ ಮೂರು ಹೊಸ ತಾಲ್ಲೂಕುಗಳ ಆಡಳಿತ ಭವನ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ’ ಎಂದರು.
ಕಮಲನಗರ ಸೇರಿದಂತೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಂದಾಜು 1.70 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಇದಲ್ಲದೆ ಜಾನುವಾರು ಮತ್ತು ಮನೆ ಕುಸಿತವಾಗಿದೆ. ಈಗಾಗಲೇ ಜಾನುವಾರು ಹಾಗೂ ಮನೆ ಹಾನಿಗೆ ಪರಿಹಾರ ನೀಡಲಾಗಿದೆ. ಅತಿವೃಷ್ಟಿಯಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಲಾಗಿದೆ. ₹ 130 ಕೋಟಿ ರಾಜ್ಯ ಮತ್ತು ₹ 170 ಕೋಟಿ ಕೇಂದ್ರ ವಿಪತ್ತು ನಿರ್ವಹಣೆ ಪರಿಹಾರ ಹಣ ಬಿಡುಗಡೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಲ್ಲದೆ ಬೆಳೆ ವಿಮೆ ಪಾವತಿಸಿದ ರೈತರಿಗೆ ಆದಷ್ಟು ಬೇಗ ವಿಮೆ ಪರಿಹಾರ ಬಿಡುಗಡೆಗೆ ಕಂಪನಿಗಳಿಗೆ ತಾಕೀತು ಮಾಡಲಾಗಿದೆ. ಶೀಘ್ರದಲ್ಲಿ ರೈತರ ಖಾತೆಗೆ ಬೆಳೆ ಪರಿಹಾರ ಜಮೆ ಮಾಡಲಾಗುತ್ತದೆ ಎಂದರು.
ಶಾಸಕ ಪ್ರಭು ಚವಾಣ್ ಮಾತನಾಡಿ, ‘ಕಮಲನಗರದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಜಾಸೌಧ ಕಟ್ಟಡದಲ್ಲಿ ಎಲ್ಲಾ ಕೇಂದ್ರ ಕಚೇರಿಗಳು ಆರಂಭಿಸಬೇಕು. ಅಲ್ಲದೆ ಕಾಮಗಾರಿ ಕಾಲಮಿತಿಯೊಳಗೆ ಮತ್ತು ಗುಣಮಟ್ಟದಿಂದ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಮಹೇಶ ಸಜ್ಜನ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿ.ಪಂ. ಸಿಇಒ ಡಾ. ಗಿರೀಶ ಬದೋಲೆ, ಬೀದರ್ ಸಹಾಯಕ ಆಯುಕ್ತ ಮಹಮ್ಮದ ಶಕೀಲ್, ಬಾಬು ಹೊನ್ನಾ ನಾಯಕ, ಹಣಮಂತರಾವ ಚವಾಣ್, ಭೀಮಸೇನರಾವ ಸಿಂಧೆ, ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ಕರ್ನಾಟಕ ಗೃಹ ಮಂಡಳಿಯ ಎಇಇ ಶಶಿಕಾಂತ, ಭೂದಾನಿಗಳಾದ ರಾಜಕುಮಾರ ಪೋ.ಪಾಟೀಲ್ ಹಾಗೂ ಶೇಷರಾವ ಪಾಟೀಲ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ನಾಗರಿಕರು ಇದ್ದರು.