ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕರು: ಸ್ವಂತ ಖರ್ಚಿನಿಂದ ಶಾಲೆಗಳ ಸುಧಾರಣೆಗೆ ಯುವಕರ ತಂಡ

ಮಾಣಿಕ ಆರ್ ಭುರೆ
Published 1 ಜನವರಿ 2022, 6:54 IST
Last Updated 1 ಜನವರಿ 2022, 6:54 IST
ಬಸವಕಲ್ಯಾಣದ ದಾಸರವಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಂಭು ಖೇಳಗೆಕರ್ ಹಾಗೂ ತಂಡದವರು ಸುಣ್ಣ ಹಚ್ಚುತ್ತಿರುವುದು
ಬಸವಕಲ್ಯಾಣದ ದಾಸರವಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಂಭು ಖೇಳಗೆಕರ್ ಹಾಗೂ ತಂಡದವರು ಸುಣ್ಣ ಹಚ್ಚುತ್ತಿರುವುದು   

ಬಸವಕಲ್ಯಾಣ: ಸರ್ಕಾರಿ ಶಾಲೆಗಳ ದುಸ್ಥಿತಿ ಕಂಡು ಮರುಗಿದ ತಾಲ್ಲೂಕಿನ ಮುಡಬಿ ಹೋಬಳಿಯ ಗ್ರಾಮಗಳ ಯುವಕರ ತಂಡವೊಂದು ಮೂರು ತಿಂಗಳಿಂದ ಸತತವಾಗಿ ಶ್ರಮಿಸಿ ಸ್ವಂತ ಖರ್ಚಿನಿಂದ ಕೆಲ ಶಾಲೆಗಳಿಗೆ ಸುಣ್ಣ, ಬಣ್ಣ ಹಚ್ಚಿ ಸುಧಾರಣೆ ಮಾಡಿದೆ.

ಬಿಸಿಎ ಪದವಿ ಪಡೆದ 24 ವರ್ಷದ ಶಂಭು ಖೇಳಗೆಕರ್ ಸಮಾಜಸೇವಾ ಮನೋಭಾವದವರು. ಮುಡಬಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲ್ಲದ್ದನ್ನು ಕಂಡು ಅದಕ್ಕಾಗಿ ಮನವಿಪತ್ರ ಸಲ್ಲಿಸಿ ಸಮಾಜ ಕಾರ್ಯದಲ್ಲಿ ಪ್ರಥಮ ಹೆಜ್ಜೆಯಿಟ್ಟರು. ನಂತರ ವಿವಿಧ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ, ಎಲ್ಲೆಡೆ ಶಾಲೆಗಳಿಗೆ ಸುಣ್ಣ ಬಣ್ಣವಿಲ್ಲದೆ ಅಂದಗೆಟ್ಟಿರುವುದು ಕಂಡು ಬಂದಿತು.

ತಮ್ಮ ಓರಗೆಯ ಯುವಕರ ಜತೆ ಶಾಲೆಗಳ ದುಸ್ಥಿತಿಯ ಕುರಿತಾಗಿ ಚರ್ಚಿಸಿ ಅವುಗಳ ಸುಧಾರಣೆಗೆ ಮುಂದಾಗುವ ನಿರ್ಣಯಕ್ಕೆ ಬಂದರು. ಕನ್ನಡಿಗರ ಘರ್ಜನೆ ಸೇವಾ ಸಂಘವನ್ನು ರಚಿಸಿಕೊಂಡು, ಪದವಿ ಶಿಕ್ಷಣ ಪಡೆಯುತ್ತಿರುವ ಅಭಿಷೇಕ ಅಣಕಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಶಾಲಾ ಆವರಣ ಸ್ವಚ್ಛತಾ ಕಾರ್ಯ ಆರಂಭಿಸಲಾಯಿತು. ಕೈಯಲ್ಲಿ ಸುಣ್ಣದ ಬಕೇಟ್, ಬ್ರಷ್ ಹಿಡಿದುಕೊಂಡು ಹಲವಾರು ಶಾಲೆಗಳಿಗೆ ಹೋಗಿ ಬಣ್ಣ ಹಚ್ಚಲಾಗಿದೆ.

ADVERTISEMENT

ನವೀನ ಹಿರದೊಡ್ಡೆ, ಸಾಗರ ಯಮ್ಹಾನ್, ಸಂದೀಪ ಎಕ್ಕಂಬೆ, ಅಭಿ ಹೊಲೆ, ಬಸವರಾಜ ಅಣಕಲ್, ಅಖಿಲೇಶ ಬಸವಗಲ್ಲಿ, ನರೇಶ ಎಗಲಂಬಿ, ಅಶ್ವಿನ ವಾಘಮಾರೆ, ಹಣಮಂತ ಕಲಖೋರಾ, ಸಚಿನ ಶಿಂಧೆ, ಅಶ್ವಿನಿ ವಾಘಮಾರೆ, ಸಂಗಮೇಶ ಪಾಟೀಲ, ಮಲ್ಲಿಕಾರ್ಜುನ ಹಾರಕೂಡೆ, ರತನ್ ಹಿರದೊಡ್ಡೆ ಮೊದಲಾದ 40 ಜನ ಯುವಕರು ಈ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

`ಕೆಲ ಶಾಲೆಗಳು ರಾತ್ರಿ ಜೂಜಿನ ಅಡ್ಡೆಗಳಾಗಿದ್ದವು. ಮದ್ಯ, ಸಿಗರೇಟ್, ಗುಟ್ಕಾ ಸೇವನೆ ಮಾಡಿ ಕೊಠಡಿಗಳಲ್ಲಿ ಬಿಸಾಡಲಾಗುತ್ತಿತ್ತು. ಅಂಥಲ್ಲಿ ಸ್ವಚ್ಛತೆ ಕೈಗೊಂಡು, ಕೊಠಡಿಗಳ ಸುಧಾರಣೆ ನಡೆಸಿ, ದುರ್ಗುಣ, ದುಶ್ಚಟಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಜಾಗೃತಿಯೂ ಮೂಡಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಅಭಿಷೇಕ್ ಅಣಕಲ್ ಹೇಳಿದ್ದಾರೆ.

`ಖಾನಾಪುರ, ದಾಸರವಾಡಿ ಪ್ರಾಥಮಿಕ ಶಾಲೆಗಳು, ಬಸವಕಲ್ಯಾಣದ ಸರ್ಕಾರಿ ಪದವಿ ಕಾಲೇಜು ಒಳಗೊಂಡು ಇದುವರೆಗೆ 20 ಶಾಲೆಗಳಿಗೆ ಬಣ್ಣ ಹಚ್ಚಲಾಗಿದೆ’ ಎಂದು ಶಂಭು ಖೇಳಗೆಕರ್ ತಿಳಿಸಿದ್ದಾರೆ.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿಗಳು ನಡೆಯುವ ಕಲ್ಯಾಣ ಮಂಟಪ ಅಂದಗೆಟ್ಟಿತ್ತು. ಕನ್ನಡಿಗರ ಘರ್ಜನೆ ಸೇವಾ ಸಂಘದವರು ಬಂದು ಸುಣ್ಣ ಹಚ್ಚಿದರು. ಆವರಣದಲ್ಲಿನ ಕಸಕಡ್ಡಿ, ಮುಳ್ಳುಕಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಬಲರಾಂ ಹುಡೆ ಯುವಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ದಾಸರವಾಡಿ ಶಾಲೆಗೆ ಸುಣ್ಣ ಹಚ್ಚಿದ್ದರಿಂದ ಶಾಲಾ ಪರಿಸರ ಸುಂದರವಾಗಿ ಕಂಗೊಳಿಸುತ್ತಿದೆ’ ಎಂದು ಅಲ್ಲಿನ ಮುಖ್ಯಶಿಕ್ಷಕ ಚಂದ್ರಕಾಂತ ಮಾಮಲೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.