ADVERTISEMENT

ಪುಟಾಣಿಗಳಲ್ಲಿ ಕುತೂಹಲ ಕೆರಳಿಸಿದ ಮಕ್ಕಳ ಹಬ್ಬ

ಹೆಸರು ನೋಂದಾಯಿಸಿದ ಬೀದರ್‌ ತಾಲ್ಲೂಕಿನ 320 ಮಕ್ಕಳು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 13:22 IST
Last Updated 14 ನವೆಂಬರ್ 2019, 13:22 IST
ಮಕ್ಕಳ ಹಬ್ಬ
ಮಕ್ಕಳ ಹಬ್ಬ   

ಬೀದರ್‌: ಕಾರ್ಮೆಲ್‌ ಸೇವಾ ಟ್ರಸ್ಟ್‌ ಹಾಗೂ ‘ಪ್ರಜಾವಾಣಿ’ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್ 15 ರಂದು ಆಯೋಜಿಸಿರುವ ‘ಮಕ್ಕಳ ಹಬ್ಬ’ಕ್ಕೆ ಇಲ್ಲಿಯ ಸೇಂಟ್‌ ಜೋಸೆಫ್‌ ಚರ್ಚ್‌ ಸಭಾಭವನ ಅಣಿಯಾಗಿದೆ.

ಮಕ್ಕಳಿಗೆ ಭರಪೂರ ಮನರಂಜನೆ, ಜಾದೂ ಕಾರ್ಯಕ್ರಮ, ಚಿತ್ರಕಲೆ, ನೃತ್ಯ, ಸಂಗೀತ, ‘ರೈಲ್ವೆ ಚೈಲ್ಡ್‌ಲೈನ್‌ನೊಂದಿಗೆ ಗೆಳೆತನ’ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ವೇದಿಕೆ ಸಿದ್ಧವಾಗಿದೆ. ಬೀದರ್‌ ತಾಲ್ಲೂಕಿನ ವಾಲ್ಗೊಡ್ಡಿ, ನಾವದಗೇರಿ, ಮರಕಲ್‌, ಗುನ್ನಳ್ಳಿ, ಮಾಳೆಗಾಂವ, ರಸೂಲಾಬಾದ್‌, ಸುಲ್ತಾನಪುರ, ಬೀದರ್‌ ನಗರದ ಜಮಗಿ ಕಾಲೊನಿ ಹಾಗೂ ಕೆನನ್‌ ಕಾಲೊನಿಯ 320ಕ್ಕೂ ಅಧಿಕ ಮಕ್ಕಳು ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. 10 ಗಂಟೆಗೆ ಜವಾಹರಲಾಲ್‌ ನೆಹರೂ ಜನ್ಮದಿನ, ಮಾತೆ ವೆರೊನಿಕಾ ಪುಣ್ಯತಿಥಿ, ಜಾಗತಿಕ ಬಡವರ ದಿನಾಚರಣೆ ಹಾಗೂ ಚೈಲ್ಡ್‌ಲೈನ್‌ ಸೇ ದೋಸ್ತಿ ಕಾರ್ಯಕ್ರಮವನ್ನು ಚಿಣ್ಣರು ಸಾಮೂಹಿಕವಾಗಿ ಉದ್ಘಾಟಿಸಲಿದ್ದಾರೆ. ‘ಪೌಷ್ಟಿಕ ಆಹಾರ ಹಾಗೂ ಮಕ್ಕಳ ಆರೋಗ್ಯ’ ಕುರಿತು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಇಂದುಮತಿ ಪಾಟೀಲ ಉಪನ್ಯಾಸ ನೀಡುವರು. ಕಾರ್ಮೆಲ್‌ ಸೇವಾ ಟ್ರಸ್ಟ್‌ ನಿರ್ದೇಶಕಿ ಸಿಸ್ಟರ್ ಕ್ರಿಸ್ಟಿನಾ ಅಧ್ಯಕ್ಷತೆ ವಹಿಸಲಿದ್ದಾರೆ.

ADVERTISEMENT

ಬೆಳಿಗ್ಗೆ 11 ಗಂಟೆಗೆ ಜಾದೂ ಪ್ರದರ್ಶನ ಹಾಗೂ ಕಿರೀಟ ಧಾರಣೆ ಕಾರ್ಯಕ್ರಮ ನಡೆಯಲಿದೆ. ಜಮಗಿ ಕಾಲೊನಿ ಮಕ್ಕಳು ‘ಮಾನವ ಕಳ್ಳ ಸಾಗಣೆ’ ಕಿರುನಾಟಕ ಪ್ರದರ್ಶಿಸಲಿದ್ದಾರೆ. ನಂತರ ಮಕ್ಕಳ ದಿನಾಚರಣೆ ಕುರಿತು ಸುಧಾಕರ್, ಮಾತೆ ವೆರೊನಿಕಾ ಕುರಿತು ಶಿಕ್ಷಕಿ ಮೇರಿ, ವಿಶ್ವ ಬಡತನ ದಿನಾಚರಣೆ ಕುರಿತು ಭಕ್ತಿ ಮೇರಿ ಹಾಗೂ ಚೈಲ್ಡ್‌ ಲೈನ್‌ ಸೇ ದೋಸ್ತಿ ಕುರಿತು ಸಂತೋಷ ಪಿಂಟೊ ಮಾತನಾಡಲಿದ್ದಾರೆ.

ಕಾರ್ಮೆಲ್‌ ಸೇವಾ ಟ್ರಸ್ಟ್‌ ಕಾರ್ಯಕ್ರಮದಲ್ಲಿ ವಿಧವೆಯರನ್ನು ಸನ್ಮಾನಿಸಲಿದೆ. ನಂತರ ಮಕ್ಕಳ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ 4 ಗಂಟೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಕೇಕ್‌ ವಿತರಿಸುವ ಮೂಲಕ ಬೀಳ್ಕೊಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.