ADVERTISEMENT

ಮಳೆಗಾಗಿ ವ್ಯಾಪಾರಿಗಳ ಪಾದಯಾತ್ರೆ

ಪಾಪನಾಶ ಶಿವಲಿಂಗಕ್ಕೆ ವಿಶೇಷ ಪೂಜೆ, ಅನ್ನ ದಾಸೋಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 15:56 IST
Last Updated 8 ಜುಲೈ 2019, 15:56 IST
ಗಾಂಧಿಗಂಜ್‌ನ ವ್ಯಾಪಾರಿಗಳು ಹಾಗೂ ಕಾರ್ಮಿಕರು ಮಳೆಗಾಗಿ ಪ್ರಾರ್ಥಿಸಿ ಬೀದರ್‌ನಲ್ಲಿ ಸೋಮವಾರ ಭಜನೆ ಮಾಡುತ್ತ ಪಾಪನಾಶ ದೇಗುಲದ ವರೆಗೆ ಪಾದಯಾತ್ರೆ ನಡೆಸಿದರು
ಗಾಂಧಿಗಂಜ್‌ನ ವ್ಯಾಪಾರಿಗಳು ಹಾಗೂ ಕಾರ್ಮಿಕರು ಮಳೆಗಾಗಿ ಪ್ರಾರ್ಥಿಸಿ ಬೀದರ್‌ನಲ್ಲಿ ಸೋಮವಾರ ಭಜನೆ ಮಾಡುತ್ತ ಪಾಪನಾಶ ದೇಗುಲದ ವರೆಗೆ ಪಾದಯಾತ್ರೆ ನಡೆಸಿದರು   

ಬೀದರ್: ಮಳೆಗಾಗಿ ಪ್ರಾರ್ಥಿಸಿ ಇಲ್ಲಿಯ ಗಾಂಧಿಗಂಜ್‌ನ ವ್ಯಾಪಾರಿಗಳು ಸೋಮವಾರ ಗಾಂಧಿಗಂಜ್‌ನಿಂದ ಐತಿಹಾಸಿಕ ಪಾಪನಾಶ ದೇಗುಲದ ವರೆಗೆ ಪಾದಯಾತ್ರೆ ನಡೆಸಿದರು.

ಗಾಂಧಿಗಂಜ್‌ನ ಬಸವೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿ ಭಜನೆ ಮಾಡುತ್ತ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಹೊಸ ಬಸ್ ನಿಲ್ದಾಣ, ಶಿವನಗರ ಮಾರ್ಗವಾಗಿ ಪಾಪನಾಶ ಮಂದಿರವನ್ನು ತಲುಪಿದರು.

ಶಿವ, ಬಸವೇಶ್ವರ ಭಾವಚಿತ್ರ, ಷಟ್‌ಸ್ಥಲ ಧ್ವಜ ಕಟ್ಟಲಾಗಿದ್ದ, ಧ್ವನಿವರ್ಧಕ ಅಳವಡಿಸಿದ್ದ ಅಲಂಕೃತ ವಾಹನ ಪಾದಯಾತ್ರೆಯಲ್ಲಿ ಎಲ್ಲರ ಗಮನ ಸೆಳೆಯಿತು.

ADVERTISEMENT

ಬೆಳಿಗ್ಗೆ ಆರಂಭವಾದ ಪಾದಯಾತ್ರೆ ಪಾಪನಾಶ ದೇಗುಲಕ್ಕೆ ತಲುಪಿದಾಗ ಸಂಜೆಯಾಗಿತ್ತು. ದೇವಸ್ಥಾನದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಳೆ, ಬೆಳೆ ಚೆನ್ನಾಗಿ ಬರಲಿ, ಎಲ್ಲೆಡೆ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.

ಪಾದಯಾತ್ರಿಗಳು ಹಾಗೂ ಭಕ್ತರಿಗೆ ಅನ್ನಪ್ರಸಾದ ದಾಸೋಹ ಮಾಡಲಾಯಿತು.

ಗಾಂಧಿಗಂಜ್‌ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ, ಬೀದರ್ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ, ಮುಖಂಡರಾದ ಅಣ್ಣಾರಾವ್ ಮೊಗಶೆಟ್ಟಿ, ಶಿವಾನಂದ ಗುನ್ನಳ್ಳಿ, ರವೀಂದ್ರ ಸಿದ್ದಾಪೂರ, ಅಶೋಕ ರೇಜಂತಲ್, ಸಂಗಶೆಟ್ಟಿ ಗುನ್ನಳ್ಳಿ, ವಿಶ್ವನಾಥ ಕಾಜಿ, ನಾಗಶೆಟ್ಟಿ ದಾಡಗೆ, ಚಂದ್ರಪ್ಪ ಹಳ್ಳಿ, ಗಾಂಧಿಗಂಜ್‌ನ ಗುಮಾಸ್ತರು, ಹಮಾಲರು ಹಾಗೂ ಸ್ವಚ್ಛತಾ ಕಾರ್ಮಿಕರು ಪಾಲ್ಗೊಂಡಿದ್ದರು.

ಗಾಂಧಿಗಂಜ್ ವ್ಯಾಪಾರಿಗಳು ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಗಾಂಧಿಗಂಜ್‌ನಿಂದ ಪಾಪನಾಶ ದೇವಸ್ಥಾನದ ವರೆಗೆ ಪಾದಯಾತ್ರೆ ನಡೆಸುತ್ತ ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.