ADVERTISEMENT

ಈರುಳ್ಳಿ, ಬೆಳ್ಳುಳ್ಳಿ ಬೆಲೆಯಲ್ಲಿ ಹೆಚ್ಚಳ

ತರಕಾರಿ ಮಾರುಕಟ್ಟೆ: ಬಹುತೇಕ ತರಕಾರಿ ಬೆಲೆ ಸ್ಥಿರ

ಗಿರಿರಾಜ ಎಸ್ ವಾಲೆ
Published 25 ನವೆಂಬರ್ 2022, 12:48 IST
Last Updated 25 ನವೆಂಬರ್ 2022, 12:48 IST
ಖಟಕಚಿಂಚೋಳಿ ಸಮೀಪದ ಹಳ್ಳಿಖೇಡ ಬಿ ಪಟ್ಟಣದ ಅಂಗಡಿಯೊಂದರಲ್ಲಿ ತರಕಾರಿ ಮಾರಾಟಕ್ಕೆ ಇಡಲಾಗಿದೆ
ಖಟಕಚಿಂಚೋಳಿ ಸಮೀಪದ ಹಳ್ಳಿಖೇಡ ಬಿ ಪಟ್ಟಣದ ಅಂಗಡಿಯೊಂದರಲ್ಲಿ ತರಕಾರಿ ಮಾರಾಟಕ್ಕೆ ಇಡಲಾಗಿದೆ   

ಖಟಕಚಿಂಚೋಳಿ: ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ಬೆಲೆಯಲ್ಲಿ ಹೇಳಿಕೊಳ್ಳುವಷ್ಟು ಏರಿಕೆಯಾಗಿಲ್ಲ. ಮಾರುಕಟ್ಟೆಯಲ್ಲಿ ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಟೊಮೆಟೊ, ಚವಳೆಕಾಯಿ ಹಾಗೂ ಸೌತೆಕಾಯಿ ಬೆಲೆ ಸ್ಥಿರವಾಗಿದೆ.

ಕಳೆದೆರಡು ವಾರಗಳಿಂದ ಜಿಲ್ಲೆಯ ತರಕಾರಿ ಮಾರುಕಟ್ಟೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ತರಕಾರಿ ಬರುತ್ತಿರುವುದರಿಂದ ಬಹುತೇಕ ತರಕಾರಿ ಬೆಲೆಯಲ್ಲಿ ಏರಿಳಿತವಾಗಿಲ್ಲ.

ಈರುಳ್ಳಿ ಹಾಗೂ ಬೆಳ್ಳುಳ್ಳಿ ಕೊಂಚ ದುಬಾರಿಯಾಗಿವೆ. ಈರುಳ್ಳಿ ಪ್ರತಿ ಕೆಜಿಗೆ ₹50 ಹಾಗೂ ಬೆಳ್ಳುಳ್ಳಿ ₹40 ರಂತೆ ಮಾರಾಟ ಆಗುತ್ತಿದೆ.

ADVERTISEMENT

ಹಿರೇಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹2 ಸಾವಿರದಷ್ಟು ಕುಸಿದಿದೆ. ಗಜ್ಜರಿ, ಪಾಲಕ್ ಬೆಲೆ ₹1 ಸಾವಿರ ಹೆಚ್ಚಳವಾದರೆ, ಬದನೆಕಾಯಿ ಬೆಲೆ ₹1 ಸಾವಿರ ಕಡಿಮೆಯಾಗಿದೆ. ಕೊತ್ತಂಬರಿ ಬೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹1 ಸಾವಿರದಷ್ಟು ಹೆಚ್ಚಳವಾಗಿದೆ.

ಹೈದರಾಬಾದ್‌ನಿಂದ ಮೆಣಸಿನಕಾಯಿ, ಆಲೂಗಡ್ಡೆ, ಮೆಂತೆ, ಬೀನ್ಸ್, ಬೆಂಡೆಕಾಯಿ ಮಾರುಕಟ್ಟೆಗೆ ಬಂದಿದೆ. ಸೊಲ್ಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಉಳಿದ ಬಹುತೇಕ ತರಕಾರಿ ತೆಲಂಗಾಣದಿಂದ ಬಂದಿದೆ.

‘ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಕರಿಬೇವು ಹಾಗೂ ಕೊತ್ತಂಬರಿ ಬಂದಿದೆ. ರೈತರಿಗೆ ಉತ್ತಮ ಬೆಲೆಯೂ ದೊರಕಿದೆ. ಆದರೆ, ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆ’ ಎಂದು ತರಕಾರಿ ಸಗಟು ವ್ಯಾಪಾರಿ ಪ್ರಶಾಂತ ತಪಸಾಳೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.