ADVERTISEMENT

ಅಂಗನವಾಡಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 13:05 IST
Last Updated 28 ನವೆಂಬರ್ 2022, 13:05 IST

ಬೀದರ್‌: ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿಯರು ಮಕ್ಕಳ ಪಾಲಿಗೆ ತಾಯಿಯಂತೆ, ಕಾರ್ಯಕರ್ತೆಯರು ಶಿಕ್ಷಕಿ ಇದ್ದಂತೆ. ಆದ್ದರಿಂದ ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಜತೆಗೆ ಮಕ್ಕಳಿಗೆ ಸರಿಯಾಗಿ ಅಡುಗೆ ತಯಾರಿಸಿ ಕೊಡಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ ಸೂಚಿಸಿದರು.

ನಗರದಲ್ಲಿ ನಡೆದ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಸಹಾಯಕಿಯರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಅಂಗನವಾಡಿ ಸಹಾಯಕಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲ್ಯ ವಿವಾಹ ನಿಷೇಧ, ಮಕ್ಕಳ ಮೇಲಿನ ಲೈಂಗೀಕ ದೌರ್ಜನ್ಯ ಕಾಯ್ದೆ, ಬಾಲಕಾರ್ಮಿಕರ ನಿಷೇದ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಕಾನೂನು ಬಾಹಿರ ಮಾರಾಟ ನಿಷೇದ ಕಾಯ್ದೆ ಹಾಗೂ ವರದಕ್ಷಿಣೆ ನಿಷೇದ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.


ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ಆಶ್ರಯ ಪಡೆಯಲು ಬಯಸಿದಲ್ಲಿ ತಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಕಷ್ಟದಲ್ಲಿರುವ ಮಹಿಳೆಗೆ ಸಾಂತ್ವನ ಅಥವಾ ಸ್ವಾಧಾರ ಕೇಂದ್ರಗಳಲ್ಲಿ ಆಶ್ರಯ ನೀಡಿ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿರುವ ನಿರ್ಗತಿಕ ಮಕ್ಕಳ ಕುಟಿರಗಳು, ಶಿಶು ಪಾಲನಾ ಕೇಂದ್ರಗಳು, ಬಾಲಕರು ಮತ್ತು ಬಾಲಕಿಯರ ನಿಲಯಗಳು, ಕೌಟಂಬಿಕ ಸಲಹಾ ಕೆಂದ್ರಗಳು, ವೃದ್ಧಾಶ್ರಮಗಳು, ಸ್ವಾಧಾರ ಮತ್ತು ಸಾಂತ್ವನ ಕೇಂದ್ರಗಳು ಹಾಗೂ ದತ್ತು ಸ್ವಿಕಾರ ಕೇಂದ್ರಗಳ ಬಗ್ಗೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರಿಗಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಕಾನೂನು ತಿಳಿವಳಿಕೆ ನೀಡಲಾಯಿತು.

ಇಲಾಖೆಯಲ್ಲಿ ಅತ್ಯಂತ ತಳಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇಲಾಖೆಯ ಕಾಯ್ದೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಇರಬೇಕು ಎಂದು ತಿಳಿಸಿದರು.
ವಲಯ ಮೇಲ್ವಿಚಾರಕಿ ಪ್ರೇಮಲತಾ ಹಾಗೂ ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.