ADVERTISEMENT

ಶಿಕ್ಷಣಕ್ಕೆ ಆದ್ಯತೆ ನೀಡಿ, ಮೂಢನಂಬಿಕೆಗಳಿಂದ ದೂರವಿರಿ

ಚಿಂತಕ ನರಸಿಂಗರಾವ್ ಹೈದರಾಬಾದ್ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 14:00 IST
Last Updated 10 ಜನವರಿ 2021, 14:00 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಬಿ.ಶ್ಯಾಮಸುಂದರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಕಿಶನರಾವ್ ದಿನೆ ಅವರು ಬರೆದ ‘ಬಿ. ಶ್ಯಾಮಸುಂದರ’ ಕೃತಿ ಬಿಡುಗಡೆ ಮಾಡಲಾಯಿತು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಬಿ.ಶ್ಯಾಮಸುಂದರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಕಿಶನರಾವ್ ದಿನೆ ಅವರು ಬರೆದ ‘ಬಿ. ಶ್ಯಾಮಸುಂದರ’ ಕೃತಿ ಬಿಡುಗಡೆ ಮಾಡಲಾಯಿತು   

ಬೀದರ್: ‘ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಅನೇಕ ಜನರು ಇಂದಿಗೂ ಮೂಢ ನಂಬಿಕೆಗಳಿಗೆ ಅಂಟಿಕೊಂಡಿರುವ ಕಾರಣ ಶೋಷಣೆಗೊಳಗಾಗುತ್ತಿದ್ದಾರೆ. ಶಿಕ್ಷಣಕ್ಕೆ ಆದ್ಯತೆ ನೀಡಿ ಮೂಢನಂಬಿಕೆಗಳಿಂದ ದೂರವಿರಬೇಕು’ ಎಂದು ಬಿ. ಶ್ಯಾಮಸುಂದರ ಅವರ ಸೋದರಳಿಯ, ಚಿಂತಕ ನರಸಿಂಗರಾವ್ ಹೈದರಾಬಾದ್ ಕರೆ ನೀಡಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಬಿ. ಶ್ಯಾಮಸುಂದರ ಜನ್ಮ ದಿನಾಚರಣೆ ಸಮಿತಿ ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಬಿ. ಶ್ಯಾಮಸುಂದರ ಅವರ 112ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ ಪ್ರಗತಿಪರ ಚಿಂತನೆಗೆ ದಾರಿ ಮಾಡುಕೊಡುತ್ತದೆ. ವ್ಯಕ್ತಿತ್ವ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲು ಮುಂದಾಗಬೇಕು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಮೂಲನಿವಾಸಿ ಸಂಘದ ರಾಷ್ಟ್ರೀಯ ಅಧ್ಯಕ್ಷ ತಾರಾರಾಮ ಮೆಹ್ನಾ ಮಾತನಾಡಿ, ‘ಹೈದರಾಬಾದ್ ಮುಕ್ತಿ ಸಂಗ್ರಾಮದಲ್ಲಿ ಶ್ಯಾಮಸುಂದರ ಪ್ರಮುಖ ಪಾತ್ರ ವಹಿಸಿದ್ದರು. ದಲಿತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಂತೆಯೇ ಅವರನ್ನು ದಕ್ಷಿಣ ಭಾರತದ ಅಂಬೇಡ್ಕರ್ ಎಂದು ಕರೆಯಲಾಗುತ್ತದೆ’ ಎಂದು ತಿಳಿಸಿದರು.

‘ಶ್ಯಾಮಸುಂದರ ಅವರು 1968ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಷಣ ಮಾಡಿ ಮುಂಬರುವ ದಿನಗಳಲ್ಲಿ ಮುಸ್ಲಿಮರು ದಲಿತರಂತೆ ಶೋಷಣೆಗೊಳಗಾಗಲಿದ್ದಾರೆ. ‘ಆಜ್ ಕಾ ಮುಸಾಲ್ಮಾನ ಕಲ್ ಕಾ ಹರಿಜನ’ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾಗುತ್ತಿದೆ’ ಎಂದು ಹೇಳಿದರು.

‘ಶ್ಯಾಮಸುಂದರ ಅವರು ನಿಜಾಮರ ಆಡಳಿತದಲ್ಲಿ ಭೂಹೀನರನ್ನು ಭೂಮಾಲೀಕರನ್ನಾಗಿ ಮಾಡಿದರು. ಆದರೆ, ಇಂದು ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ರೈತರ ಕತ್ತು ಹಿಸುಕುವ ಕಾರ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.

ಮಾಜಿ ಶಾಸಕ ಜುಲ್ಫೆಕಾರ್ ಹಾಸ್ಮಿ ಮಾತನಾಡಿ, ‘ಶೇರ್-ಎ-ದಖ್ಖನ್ ಎಂಬ ಬಿರುದು ಪಡೆದಿರುವ ಬಿ. ಶ್ಯಾಮಸುಂದರ ಅವರು ದಕ್ಷಿಣ ಭಾರತದ ಅಂಬೇಡ್ಕರ್ ಅಂದರೆ ತಪ್ಪೇನಿಲ್ಲ. ಶೋಷಿತ ವರ್ಗಗಳ ಏಕತೆ ಹಾಗೂ ಏಳಿಗೆಗಾಗಿ ಹೋರಾಟ ಮಾಡಿದ ಮಹಾನ ನಾಯಕ’ ಎಂದು ಬಣ್ಣಿಸಿದರು.

‘ಶ್ಯಾಮಸುಂದರ ಭಾಲ್ಕಿ ದ್ವಿಸದಸ್ಯ ವಿಧಾನಸಭಾ ಮತಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬೀದರ್ ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದಂತೆ ಶ್ಯಾಮಸುಂದರ ಅವರನ್ನು ಸೋಲಿಸಲು ಪ್ರಧಾನಮಂತ್ರಿ ಜವಾಹರಲಾಲ ನೆಹರು ಬೀದರ್ ಜಿಲ್ಲೆಗೆ ಬಂದು ಪ್ರಚಾರ ಮಾಡಿದ್ದರು’ ಎಂದು ತಿಳಿಸಿದರು.

‘ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಬಿ. ಶ್ಯಾಮಸುಂದರ ಗರಡಿಯಲ್ಲಿ ಬೆಳೆದಿದ್ದರು’ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ್ ಮಾತನಾಡಿ, ‘ನಿಜಾಂ ಆಡಳಿತದಲ್ಲಿ ಮಂತ್ರಿಯಾಗಿದ್ದ ಬಿ. ಶ್ಯಾಮಸುಂದರ ಅವರು ಆ ಕಾಲದಲ್ಲಿಯೇ ₹ 1 ಕೋಟಿ ಅನುದಾನವನ್ನು ಶಿಕ್ಷಣಕ್ಕಾಗಿ ಮೀಸಲಿಡಲು ನಿಜಾಂನ ಮನವೊಲಿಸಿದ್ದರು. 28 ವಸತಿ ನಿಲಯಗಳನ್ನು ಆರಂಭಿಸಿದ್ದರು’ ಎಂದು ತಿಳಿಸಿದರು.

ಸಮಾಂತರ ಭಾರತ ನಿರ್ದೇಶಕ ಎಸ್. ವರುಣಕುಮಾರ ಮಾತನಾಡಿ, ‘₹5 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಸಾಹಿತ್ಯವನ್ನು 12 ಸಂಪುಟಗಳಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದರು.

ಅತಿಥಿಗಳಾಗಿ ಪಂಜಾಬದ ದಾದಾಸಾಹೇಬ ಕಾನ್ಸಿರಾಮ ಅವರ ಸೋದರಳಿಯ ಪ್ರಭಜಿತಸಿಂಗ್, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿ.ಟಿ ಕಾಂಬಳೆ, ಸಂವಿಧಾನ ರಕ್ಷಣಾ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್, ಬಿ.ಶ್ಯಾಮಸುಂದರ ಅವರ ಒಡನಾಡಿ ಪ್ರಕಾಶ ಮೂಲಭಾರತಿ, ಬಾಮ್‍ಸೇಫ್ ಕೇಂದ್ರ ಕಾರ್ಯಕಾರಿಣಿ ಸದಸ್ಯ ಬಿ.ಬಿ.ಮೇಶ್ರಂ ಮಾತನಾಡಿದರು.

ಸಾಹಿತಿ ಕಿಶನರಾವ್ ದಿನೆ ಅವರು ಬರೆದ ‘ಬಿ. ಶ್ಯಾಮಸುಂದರ’ ಕೃತಿ ಬಿಡುಗಡೆ ಮಾಡಲಾಯಿತು. ಬಕ್ಕಪ್ಪ ದಂಡಿನ, ಶಂಕರ ಚೊಂಡಿ, ದೇವದಾಸ ಚಿಮಕೋಡ ಹಾಗೂ ಸಂಗಡಿಗರು ಭೀಮ ಕ್ರಾಂತಿ ಗೀತೆಗಳು ಹಾಡಿದರು. ಆರಂಭದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಡಾ.ಬಿ.ಆರ್.ಅಂಬೇಡ್ಕರ್, ಬಿ. ಶ್ಯಾಮಸುಂದರ ಮತ್ತು ಕಾನ್ಶಿರಾಮ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಲಾಯಿತು.

ಬಿ.ಡಿ. ಬೋರಕರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಾರುತಿ ಮಾಲೆ, ಸೈಯದ್ ಅಮೀನ್ ಜಾಫ್‍ರಿ, ಅಣ್ಣಾಭಾವು ಸಾಠೆ ಅವರ ಮರಿಮೊಮ್ಮಗ ವಿಲಾಸ್‌ ಸಾಠೆ, ಮಣಿರಾಮ್, ಮಾವಳಿ ಶಂಕರ, ಸೈಯದ್ ಮಕ್ಸೂದ್, ಪ್ರೊ.ಅನ್ವರ್ ಖಾನ್, ವಿಠಲದಾಸ್ ಪ್ಯಾಗೆ, ರಮೇಶ ಡಾಕುಳಗಿ ಇದ್ದರು.

ಶ್ಯಾಮಸುಂದರ ಅಭಿಮಾನಿಗಳ ಬಳಗದ ಅಧ್ಯಕ್ಷ ಮಹಾದೇವ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಟಾಳೆ ಸ್ವಾಗತಿಸಿದರು. ಅಶೋಕಕುಮಾರ ಮಾಳಗೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.