ADVERTISEMENT

ಮುತಾಲಿಕ, ಆಂದೋಲನ ಸಿದ್ದಲಿಂಗ ಸ್ವಾಮೀಜಿ ಬೀದರ್‌ ಜಿಲ್ಲಾ ಪ್ರವೇಶಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 4:29 IST
Last Updated 5 ಜೂನ್ 2022, 4:29 IST
ಬಸವಕಲ್ಯಾಣ ತಾಲ್ಲೂಕಿನ ಗಡಿಯಲ್ಲಿ ಕೊಹಿನೂರ ಹತ್ತಿರ ಶನಿವಾರ ಪ್ರಮೋದ ಮುತಾಲಿಕ, ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ಬೀದರ್ ಜಿಲ್ಲೆ ಪ್ರವೇಶಿಸದಂತೆ ತಡೆದರು
ಬಸವಕಲ್ಯಾಣ ತಾಲ್ಲೂಕಿನ ಗಡಿಯಲ್ಲಿ ಕೊಹಿನೂರ ಹತ್ತಿರ ಶನಿವಾರ ಪ್ರಮೋದ ಮುತಾಲಿಕ, ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ಬೀದರ್ ಜಿಲ್ಲೆ ಪ್ರವೇಶಿಸದಂತೆ ತಡೆದರು   

ಬಸವಕಲ್ಯಾಣ: ಶ್ರೀರಾಮ ಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಮತ್ತು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ಶನಿವಾರ ತಾಲ್ಲೂಕಿನ ಗಡಿಯಲ್ಲಿ ತಡೆದು, ವಾಪಸ್ ಕಳುಹಿಸಿದ್ದಾರೆ.

ಮೂಲ ಅನುಭವ ಮಂಟಪ ವಿವಾದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಜೊತೆ ಚರ್ಚಿಸಲು ಇಬ್ಬರೂ ಇಲ್ಲಿಗೆ ಬರುತ್ತಿದ್ದರು. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸಲಗರ ಮೂಲಕ ತಾಲ್ಲೂಕಿನ ಗಡಿ ಪ್ರವೇಶಿಸುತ್ತಿದ್ದ ವೇಳೆ ಕೊಹಿನೂರ ಬಳಿ ಇಬ್ಬರನ್ನೂ ತಡೆಯಲಾಯಿತು.

ಎಎಸ್ಪಿ ಮಹೇಶ ಮೇಘಣ್ಣನವರ್ ನೇತೃತ್ವದಲ್ಲಿ ಮೊದಲೇ ಇಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ADVERTISEMENT

‘ನಿಮ್ಮಿಬ್ಬರ ಗಡಿ ಪ್ರವೇಶ ನಿರ್ಬಂಧಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಮುಂದಕ್ಕೆ ಹೋಗುವಂತಿಲ್ಲ’ ಎಂದು ಪೊಲೀಸರು ಹೇಳಿದಾಗ, ಮುತಾಲಿಕ ಕೆಲ ಹೊತ್ತು ರಸ್ತೆಯಲ್ಲಿ ಕೂತು ಪ್ರತಿಭಟಿಸಿದರು.

ಸಿದ್ದಲಿಂಗ ಸ್ವಾಮೀಜಿ ಅವರು ಜಿಲ್ಲಾಡಳಿತ ವಿರುದ್ಧ ಹಾಗೂ ಶಾಸಕರು ಹಿಂದು ವಿರೋಧಿ ಆಗಿದ್ದಾರೆ ಎಂದು ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಪೋಲಿಸರ ಮನವೊಲಿಕೆ ನಂತರ ಇಬ್ಬರು ಹಿಂದಿರುಗಿದರು. ತಹಶೀಲ್ದಾರ್ ಸಾವಿತ್ರಿ ಸಲಗರ, ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ರಘುವೀರಸಿಂಗ್ ಠಾಕೂರ ಇದ್ದರು.

ಮೂಲಅನುಭವ ಮಂಟಪದ ವಶಕ್ಕಾಗಿ ಜೂನ್ 12 ರಂದು ಇಲ್ಲಿ ಮಠಾಧೀಶರ ಸಮಾವೇಶ‌ ನಡೆಯಲಿರುವ ಕಾರಣ ನಗರ ಮತ್ತು ಇತರೆಡೆ ಪೋಲಿಸ್ ಬಿಗಿ‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪ್ರಮೋದ ಮುತಾಲಿಕ ಮತ್ತು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಇಬ್ಬರೂ ಜೂನ್‌ 12ರವರೆಗೂ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.