ADVERTISEMENT

ಜನರ ಸಹಭಾಗಿತ್ವದಿಂದ ಯೋಜನೆ ಸಫಲ

ಅಕ್ಕಸಾಲಿಗರಿಗೆ ಪ್ರಮಾಣಪತ್ರ ವಿತರಣೆ ವೇಳೆ ಸಂಸದ ಭಗವಂತ ಖೂಬಾ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 13:21 IST
Last Updated 6 ಜನವರಿ 2019, 13:21 IST
ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು. ನಂದಕಿಶೋರ ವರ್ಮಾ, ರಾಮಮೂರ್ತಿ, ರಘುನಾಥ ಮಲ್ಕಾಪುರೆ, ಸುರೇಖಾ ಇದ್ದಾರೆ
ಪ್ರಮಾಣಪತ್ರ ವಿತರಣೆ ಕಾರ್ಯಕ್ರಮವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು. ನಂದಕಿಶೋರ ವರ್ಮಾ, ರಾಮಮೂರ್ತಿ, ರಘುನಾಥ ಮಲ್ಕಾಪುರೆ, ಸುರೇಖಾ ಇದ್ದಾರೆ   

ಬೀದರ್‌: ‘ಸರ್ಕಾರ ಯಾವುದೇ ಯೋಜನೆ ಜಾರಿ ಮಾಡಿದ ತಕ್ಷಣಕ್ಕೆ ಅದು ಯಶ ಕಾಣುವುದಿಲ್ಲ. ಜನರ ಸಹಭಾಗಿತ್ವ ಇದ್ದರೆ ಮಾತ್ರ ಯೋಜನೆಗಳು ಸಫಲಗೊಳ್ಳಲು ಸಾಧ್ಯ’ ಎಂದು ಸಂಸದ ಭಗವಂತ ಖೂಬಾ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ಮಧುರೈ ಗೋಲ್ಡ ಸ್ಮೀತ್ ಅಕಾಡೆಮಿಯಿಂದ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ತರಬೇತಿ ಪಡೆದ ಅಕ್ಕಸಾಲಿಗರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಯುವಕರಿಗೆ ಹಲವು ಬಗೆಯ ಕೌಶಲ ತರಬೇತಿ ನೀಡುತ್ತಿದೆ. ಕೃಷಿ ಉತ್ಪನ್ನ ಹೆಚ್ಚಿಸುವ ದಿಸೆಯಲ್ಲಿ ರೈತರಿಗೂ ಕೌಶಲ ತರಬೇತಿಯನ್ನು ವಿಸ್ತರಿಸಲಾಗಿದೆ. ಪದವಿಧರರು ವೃತ್ತಿ ಕೌಶಲ ಪಡೆದು ಸ್ವಂತ ಉದ್ಯೋಗ ಆರಂಭಿಸಬಹುದು ಅಥವಾ ಉದ್ಯೋಗಕ್ಕೆ ಸೇರಬಹುದು. ಒಟ್ಟಾರೆ ತರಬೇತಿ ಪಡೆದವರು ಇತರರಿಗೆ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.

ADVERTISEMENT

‘ಕೌಶಲ ತರಬೇತಿ ನೀಡುವ ಸಂಸ್ಥೆ ತರಬೇತಿ ಪೂರೈಸಿದವರಿಗೆ ಉದ್ಯೋಗವನ್ನೂ ಕಲ್ಪಿಸಬೇಕು ಎನ್ನುವ ಷರತ್ತು ಹಾಕಿರುವ ಕಾರಣ ಇಂದು ಅನೇಕ ಯುವಕರಿಗೆ ಉದ್ಯೋಗ ದೊರಕುತ್ತಿದೆ. ದೇಶದ 13 ಕೋಟಿ ನಿರುದ್ಯೋಗಿಗಳಿಗೆ ₹ 6 ಲಕ್ಷ ಕೋಟಿ ಸಾಲ ಸೌಲಭ್ಯ ಒದಗಿಸಲಾಗಿದೆ. ಈಗಾಗಲೇ 3 ಕೋಟಿ ಯುವಕರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು.

‘ಯುವಕರು ಕೇಂದ್ರ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಸ್ವ ಉದ್ಯೋಗ ಆರಂಭಿಸಬೇಕು. ಈ ಮೂಲಕ ಸ್ವಾವಲಂಬಿ ಬದುಕು ನಡೆಸಬೇಕು’ ಎಂದು ಹೇಳಿದರು.

‘ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಆದರೆ ಕಾಂಗ್ರೆಸ್‌ ಕನಸು ನನಸಾಗದು’ ಎಂದರು.

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್ ಮಲ್ಕಾಪುರೆ ಮಾತನಾಡಿದರು.

ಅಖಿಲ ಭಾರತೀಯ ಸುವರ್ಣಕಾರ ಸಂಘದ ಸಂಘಟನಾ ಕಾರ್ಯದರ್ಶಿ ಆರ್‌. ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರದ ಸುರೇಖಾ, ಎಸ್.ಬಿ.ಐ. ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಎಂ. ಕಮತಗೆ, ಮಧುರೈ ಗೋಲ್ಡ ಸ್ಮಿತ್ ಅಕಾಡೆಮಿ ಸಂಯೋಜಕ ಪಿ.ಗುರು ಆನಂದನ್, ಕರ್ನಾಟಕ ರಾಜ್ಯ ಸುರ್ವಣಕಾರ ಸಂಘದ ಉಪಾಧ್ಯಕ್ಷ ನಂದಕಿಶೋರ್, ಕಲಬರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಪೊದ್ದಾರ, ಯಾದಗಿರಿಯ ಮೌನೇಶ್ ಕೆಂಭಾವಿ, ಬೀದರ್‌ನ ಬಾಬುರಾವ್ ವಿಶ್ವಕರ್ಮ, ನಿಜಗುಣಿ ಶಿಲವಂತ್ ಹಾಗೂ ಕಾಸುಲ್‌ ವರಕುಮಾರಚಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.