ಬೀದರ್: ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನದ ಅಂಗವಾಗಿ ನಗರದಲ್ಲಿ ಗುರುವಾರ ನಗರದಲ್ಲಿ ಸಂವಾದದಲ್ಲಿ ಕಾರ್ಯಕ್ರಮ ಜರುಗಿತು.
ಜಮಾತೆ ಇಸ್ಲಾಮಿ ಹಿಂದ್ ಕೇಂದ್ರ ಸಲಹಾ ಮಂಡಳಿ ಸದಸ್ಯ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ಮಾತನಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಸ್ತುತ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ಅನ್ಯಾಯ, ದಬ್ಬಾಳಿಕೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ನಿರಪರಾಧಿಗಳು 30-35 ವರ್ಷ ಜೈಲಿನಲ್ಲಿದ್ದು ನಂತರ ನಿರಪರಾಧಿಗಳಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಐದು ವರ್ಷಗಳಿಂದ ಜೈಲಿನಲ್ಲಿರುವ ಕೆಲವರ ವಿಚಾರಣೆ ಇನ್ನೂ ಪ್ರಾರಂಭವೇ ಆಗಿಲ್ಲ ಎಂದು ತಿಳಿಸಿದರು.
ಪ್ರವಾದಿ ಅವರು ಗಂಡು-ಹೆಣ್ಣು ಎನ್ನುವ ಭೇದ ತೊಡೆದು ಹಾಕಿದರು. ಯಾರಿಗಾದರೂ ಮೂವರು ಹೆಣ್ಣುಮಕ್ಕಳಿದ್ದರೆ, ಅವರ ಪಾಲನೆ-ಪೋಷಣೆ ಮಾಡಿದರೆ ಅವನು ಪ್ರವಾದಿಯವರ ಜತೆ ಸ್ವರ್ಗದಲ್ಲಿರುವನು ಎಂದು ಹೇಳಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಜಾಮುದ್ದೀನ್ ಮಾತನಾಡಿ, ಪೈಗಂಬರ್ ಮುಹಮ್ಮದ್ ನ್ಯಾಯದ ಹರಿಕಾರರಾಗಿದ್ದಾರೆ. ಸಾಮಾಜಿಕ, ಆರ್ಥಿಕ, ಮೂಲಭೂತ ಸೌಲಭ್ಯಗಳಂತಹ ವಿಷಯಗಳಲ್ಲಿ ಅವರ ನ್ಯಾಯ ಪರತೆ ಕಾಣಬಹುದು ಎಂದು ತಿಳಿಸಿದರು.
ಉಪನ್ಯಾಸಕಿ ವಿದ್ಯಾದೇವಿ ಹಿರೇಮಠ ಮಾತನಾಡಿ, ನಾನು ಪ್ರವಾದಿ ಮುಹಮ್ಮದ್‍ರ ಜೀವನದ ಪುಸ್ತಕ ಓದಿದಾಗ ಅವರ ಕುರಿತ ನನ್ನ ಮೊದಲಿನ ಅಭಿಪ್ರಾಯ ಬದಲಾಯಿತು. ನಿಷ್ಪಕ್ಷಪಾತ ಕನ್ನಡಕದಿಂದ ಇಸ್ಲಾಂ ಧರ್ಮದ ಅಧ್ಯಯನ ಮಾಡಿದರೆ ಸತ್ಯ ತಿಳಿಯುತ್ತದೆ ಎಂದರು.
ರಾಮಚಂದ್ರ ಗಣಾಪುರ, ಡಾ. ವಿಜಯಶ್ರೀ ಬಶೆಟ್ಟಿ ಅವರು ಪ್ರವಾದಿಯವರ ಜೀವನದ ಮೇಲೆ ಬೆಳಕು ಚೆಲ್ಲಿದರು. ಶಾಂತಿ ಪ್ರಕಾಶನದ ಪ್ರವಾದಿ ಮುಹಮ್ಮದ್ ಅವರ ಜೀವನ ಕುರಿತ ಎರಡು ಕೃತಿಗಳನ್ನು ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ಹಾಗೂ ಕಾಂಗ್ರೆಸ್ ನಾಯಕಿ ಗೀತಾ ಪಂಡಿತರಾವ್ ಚಿದ್ರಿ ಬಿಡುಗಡೆ ಮಾಡಿದರು.
ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠ್ಠಲದಾಸ್ ಪ್ಯಾಗೆ, ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಅಸ್ಮಾ ಸುಲ್ತಾನಾ, ಜಿಲ್ಲಾ ಸಂಚಾಲಕಿ ತಾಹೀದ್ ಸಿಂಧೆ, ಪ್ರಮುಖರಾದ ಶ್ರೀಕಾಂತ ಸ್ವಾಮಿ, ಗುರುನಾಥ ಗಡ್ಡೆ, ಓಂಪ್ರಕಾಶ ರೊಟ್ಟೆ, ಮಹೇಶ ಗೋರನಾಳಕರ್, ವಿನಯ್ ಮಾಳಗೆ, ಎಂ.ಎಸ್. ಉಪ್ಪಿನ್, ಡಾ. ಲಕ್ಕಿ, ಬಾಬುರಾವ್ ಹೊನ್ನಾ, ವಿಜಯಕುಮಾರ, ಜಗದೀಶ್ ಬಿರಾದಾರ, ಶಿಕ್ಷಕಿಯರಾದ ಬಿಲ್‍ಕಿಸ್ ಫಾತಿಮಾ, ಲತಿಕಾ, ಡಾ. ಸಾಲಿಕಾ ಕೌಸರ್ ಮತ್ತಿತರರು ಇದ್ದರು.
ಮುಹಮ್ಮದ್ ತಾಹಾ ಕಲಿಮುದ್ದೀನ್ ಕುರಾನ್ ಪಠಿಸಿದರು. ಸಿರಾಜ್ ನೆಲವಾಡ ಕನ್ನಡಕ್ಕೆ ಅನುವಾದಿಸಿದರು. ಜಮಾತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಮುಹಮ್ಮದ್ ಮೌಜ್ಜಂ ಸ್ವಾಗತಿಸಿದರು. ಮುಹಮ್ಮದ್ ಆರಿಫುದ್ದೀನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.