ADVERTISEMENT

ನಾರಾಯಣಸ್ವಾಮಿ, ರವಿಕುಮಾರ ಸದಸ್ಯತ್ವ ರದ್ದತಿಗೆ ಒತ್ತಾಯ

ಸಚಿವ ಪ್ರಿಯಾಂಕ್‌ ಖರ್ಗೆ ತೇಜೋವಧೆ ಖಂಡಿಸಿ ದಲಿತ ಒಕ್ಕೂಟದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 16:15 IST
Last Updated 4 ಜೂನ್ 2025, 16:15 IST
ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬೀದರ್‌ನಲ್ಲಿ ಬುಧವಾರ ವಿಧಾನ ಪರಿಷತ್‌ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್‌. ರವಿಕುಮಾರ, ಮಣಿಕಂಠ ರಾಠೋಡ್‌ ಭಾವಚಿತ್ರ ದಹಿಸಿದರು
ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬೀದರ್‌ನಲ್ಲಿ ಬುಧವಾರ ವಿಧಾನ ಪರಿಷತ್‌ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್‌. ರವಿಕುಮಾರ, ಮಣಿಕಂಠ ರಾಠೋಡ್‌ ಭಾವಚಿತ್ರ ದಹಿಸಿದರು   

ಬೀದರ್‌: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತೇಜೋವಧೆ ಮಾಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯ ಎನ್‌. ರವಿಕುಮಾರ ಅವರ ಸದಸ್ಯತ್ವ ರದ್ದುಪಡಿಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಎರಡೂ ಸಂಘಟನೆಗಳ ಕಾರ್ಯಕರ್ತರು ನಾರಾಯಣಸ್ವಾಮಿ, ರವಿಕುಮಾರ, ಮಣಿಕಂಠ ರಾಠೋಡ್‌, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಮೂವರು ಮುಖಂಡರು ಭಾವಚಿತ್ರಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಆನಂತರ ಧರಣಿ ನಡೆಸಿದರು. ಮುಖಂಡ ಸಂದೀಪ್‌ ಕಾಂಟೆ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಕೋವಿಡ್‌, ಬಿಟ್‌ ಕಾಯಿನ್‌, ಪಿಎಸ್‌ಐ ನೇಮಕಾತಿ ಹಗರಣವನ್ನು ಬಯಲಿಗೆ ಎಳೆದಿದ್ದರು. ಅದನ್ನು ಸಹಿಸದೇ ಅವರ ವೈಯಕ್ತಿಕ ನಿಂದನೆಗೆ ಬಿಜೆಪಿ ಮುಖಂಡರು ಇಳಿದಿದ್ದಾರೆ. ಇದು ಶೋಭೆ ತರುವುದಿಲ್ಲ ಎಂದರು.

ADVERTISEMENT

ಮುಖಂಡ ಬಾಬು ಪಾಸ್ವಾನ್ ಮಾತನಾಡಿ, ಪ್ರಿಯಾಂಕ್‌ ಖರ್ಗೆ ಅವರ ಏಳಿಗೆ ಸಹಿಸದೇ ಅವರ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಇದೇ ಛಲವಾದಿ ನಾರಾಯಣಸ್ವಾಮಿ ಖರ್ಗೆಯವರ ಜೊತೆಗಿದ್ದಾಗ ಅವರ ಗುಣಗಾನ ಮಾಡುತ್ತಿದ್ದರು. ಈಗ ಬಿಜೆಪಿ ಮಾತು ಕೇಳಿ ಟೀಕಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕು ಇದೆ. ಆದರೆ, ವೈಯಕ್ತಿಕ ಟೀಕೆ, ತೇಜೋವಧೆಗೆ ಅವಕಾಶ ಇಲ್ಲ ಎಂದು ಹೇಳಿದರು.

ಅನಿಲಕುಮಾರ ಬೆಲ್ದಾರ ಮಾತನಾಡಿ, ಧೀಮಂತ ನಾಯಕ ಖರ್ಗೆ ಅವರ ಬಾಯಿ‌ಮುಚ್ಚಿಸಿ ಕೆಟ್ಟ‌ಹೆಸರು ತರಲು ಸಂಘ ಪರಿವಾರ, ಬಿಜೆಪಿ ಯತ್ನಿಸುತ್ತಿದೆ. ಛಲವಾದಿ ನಾರಾಯಣಸ್ವಾಮಿ ಮೂವತ್ತು ವರ್ಷ ಖರ್ಗೆಯವರ ಮನೆಬಾಗಿಲು ಕಾಯ್ದು ಯಾವುದೋ ಆಮಿಷಕ್ಕೆ ಒಳಗಾಗಿ ಬಿಜೆಪಿ ಸೇರಿದ್ದಾರೆ. ನಾರಾಯಣಸ್ವಾಮಿ ಮುಖವಾಡವಷ್ಟೇ. ಇದನ್ನು ಮಾಡಿಸುತ್ತಿರುವವರು ಸಂಘ ಪರಿವಾರದವರು. ಅಕ್ಕಿ ಕಳ್ಳ ಮಣಿಕಂಠ ರಾಠೋಡ್ ಕೂಡ ಖರ್ಗೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಸವರಾಜ ಮಾಳಗೆ ಮಾತನಾಡಿ, ಆರ್‌ಎಸ್‌ಎಸ್‌ನವರು ಶೋಷಿತರನ್ನು ಬಿಟ್ಟು ದಲಿತ ಮುಖಂಡರ ಅವಹೇಳನ ಮಾಡಿಸುತ್ತಿದ್ದಾರೆ. ನಾರಾಯಣಸ್ವಾಮಿ,‌ ರವಿಕುಮಾರ ಹೊಟ್ಟೆ ಪಾಡಿಗಾಗಿ ಬಿಜೆಪಿ ಸೇರಿದ್ದಾರೆ. ಇಬ್ಬರ ಹೇಳಿಕೆ ಖಂಡನಾರ್ಹ ಎಂದರು.

ಗೋವರ್ಧನ್ ರಾಠೋಡ್, ಜಾನ್ ವೆಸ್ಲಿ, ವಿನೋದ ಅಪ್ಪೆ, ಶಿವಕುಮಾರ ನೀಲಿಕಟ್ಟಿ, ಅಂಬಾದಾಸ ಗಾಯಕವಾಡ, ಪ್ರದೀಪ ನಾಟೇಕರ್‌, ಸಾಯಿ ಸಿಂಧೆ, ರಘುನಾಥ ಗಾಯಕವಾಡ, ಬಾಬು ಮಿಠಾರೆ, ರಮೇಶ ಮಂದಕನಳ್ಳಿ, ರಮೇಶ ಪಾಸ್ವಾನ್‌, ಸುನೀಲ ಸಂಗ, ಭಗತ್‌ ಸಿಂಧೆ, ಅಂಬೇಡ್ಕರ್‌ ಸಾಗರ, ಶಿವರಾಜ ಲಾಡಕರ್‌, ಕಲ್ಯಾಣರಾವ್‌ ಗುನ್ನಳ್ಳಿಕರ್‌, ಪುಟ್ಟರಾಜ ದೀನೆ, ಸುಬ್ಬಣ್ಣ ಕರಕನಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.