ADVERTISEMENT

ಬೀದರ್‌ | ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ ಆರೋಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 9:24 IST
Last Updated 19 ಆಗಸ್ಟ್ 2024, 9:24 IST
<div class="paragraphs"><p>ಬೀದರ್‌ನಲ್ಲಿ&nbsp;ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.</p></div>

ಬೀದರ್‌ನಲ್ಲಿ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

   

ಬೀದರ್‌: ಕೇಂದ್ರ ಸರ್ಕಾರದ ಅಣತಿಯಂತೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಕೆಲಸ ನಿರ್ವಹಿಸುತ್ತಿದ್ದು, ಅದರ ಭಾಗವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದಕಾರಣ ಅವರನ್ನು ತಕ್ಷಣವೇ ವಾಪಸ್‌ ಕರೆಸಿಕೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಸೂಚನೆ ಮೇರೆಗೆ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೇರಿ, ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಬಳಿಕ ರಾಷ್ಟ್ರಪತಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ADVERTISEMENT

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮುಖಂಡರು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ. ಇದರ ಭಾಗವಾಗಿಯೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಇದು ಸಂಪೂರ್ಣ ಕಾನೂನುಬಾಹಿರ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರು ಹಿಂದುಳಿದ ವರ್ಗಕ್ಕೆ ಸೇರಿದ ದೊಡ್ಡ ಮುಖಂಡರು. ಎರಡನೇ ಬಾರಿಗೆ ಅವರು ಮುಖ್ಯಮಂತ್ರಿ ಆಗಿರುವುದನ್ನು ಬಿಜೆಪಿಯವರು ಸಹಿಸುತ್ತಿಲ್ಲ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ರಾಜ್ಯ ಬಿಜೆಪಿ ಹತಾಶೆಯಿಂದ ಕೇಂದ್ರ ಸರ್ಕಾರದ ಸಹಾಯದೊಂದಿಗೆ ರಾಜ್ಯಪಾಲರನ್ನು ಬಳಸಿಕೊಂಡು ಮುಖ್ಯಮಂತ್ರಿ ವಿರುದ್ಧ ಷಡ್ಯಂತ್ರ ಹೆಣೆಯುತ್ತಿದೆ. ಕೇಂದ್ರದ ತಾಳಕ್ಕೆ ತಕ್ಕಂತೆ ರಾಜ್ಯಪಾಲರು ಕುಣಿಯುತ್ತಿದ್ದಾರೆ. ಕೇಂದ್ರ ಸರ್ಕಾರವು ದೆಹಲಿ, ಜಾರ್ಖಂಡ್‌, ಉತ್ತರಾಖಂಡ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಲ್ಲಿನ ಬಿಜೆಪಿಯೇತರ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಬಳಸಿಕೊಂಡಿರುವುದು ಕಣ್ಣೆದುರಿಗಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ಹುನ್ನಾರ ನಡೆಸಿದ್ದಾರೆ. ಆದರೆ, ಅದರಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಹೇಳಿದರು.

ರಾಷ್ಟ್ರಪತಿಗಳು ತಕ್ಷಣವೇ ಮಧ್ಯ ಪ್ರವೇಶಿಸಿ, ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವ ಅನುಮತಿ ಹಿಂಪಡೆಯಬೇಕೆಂದು ರಾಜ್ಯಪಾಲರಿಗೆ ಸೂಚನೆ ಕೊಡಬೇಕು. ರಾಜಭವನ ರಾಜಕೀಯತೇರವಾಗಿ ಕೆಲಸ ನಿರ್ವಹಿಸಲು ಕ್ರಮ ಜರುಗಿಸಬೇಕು. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ್‌, ಮಾಜಿಸಂಸದ ನರಸಿಂಗ್‌ರಾವ್‌ ಸೂರ್ಯವಂಶಿ, ಮಾಜಿ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಮುಖಂಡರಾದ ಸಂಜಯ್‌ ಜಾಹಗೀರದಾರ್‌, ಕೆ. ಪುಂಡಲೀಕರಾವ್‌, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ವಿನೋದ್‌ ಅಪ್ಪೆ, ಮೊಹಮ್ಮದ್‌ ರಿಯಾಜ್‌, ಜಾರ್ಜ್‌ ಫರ್ನಾಂಡಿಸ್‌, ಪರ್ವೇಜ್‌ ಕಮಲ್‌, ಸುನೀಲ್‌ ಬಚ್ಚನ್‌, ವಿಶಾಲ ದೊಡ್ಡಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.