ADVERTISEMENT

ಪ್ರವರ್ಗ 2ಗೆ ಸೇರಿಸಲು ಒತ್ತಾಯಿಸಿ ಪ್ರತಿಭಟನೆ

ಮರಾಠಾ ಕ್ರಾಂತಿ ಮೋರ್ಚಾದಿಂದ ಮುಖ್ಯಮಂತ್ರಿಗೆ ಮನವಿ ಪತ್ರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 15:00 IST
Last Updated 7 ಡಿಸೆಂಬರ್ 2022, 15:00 IST
ಮರಾಠಾ ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸಬೇಕು ಎಂದು ಆಗ್ರಹಿಸಿ ಸಮಾಜದ ಕಾರ್ಯಕರ್ತರು ಮರಾಠಾ ಕ್ರಾಂತಿ ಮೋರ್ಚಾ ಮುಂದಾಳತ್ವದಲ್ಲಿ ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು
ಮರಾಠಾ ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸಬೇಕು ಎಂದು ಆಗ್ರಹಿಸಿ ಸಮಾಜದ ಕಾರ್ಯಕರ್ತರು ಮರಾಠಾ ಕ್ರಾಂತಿ ಮೋರ್ಚಾ ಮುಂದಾಳತ್ವದಲ್ಲಿ ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು   

ಬೀದರ್: ಮರಾಠಾ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಮರಾಠಾ ಸಮಾಜದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕಾರ್ಯಕರ್ತರು ಮರಾಠಾ ಕ್ರಾಂತಿ ಮೋರ್ಚಾ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ರಾಜ್ಯದಲ್ಲಿ ಮರಾಠಾ ಸಮಾಜ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜದ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎನ್.ಶಂಕರೆಪ್ಪ ಅವರು ಸಮಾಜವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎ ಗೆ ಸೇರಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು ಎಂದು ಹೇಳಿದರು.

ADVERTISEMENT

ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸುತ್ತ ಬರಲಾಗಿದೆ. ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವುದಾಗಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಅವರು ತಮ್ಮ ಅವಧಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜದ ಏಳಿಗೆಗಾಗಿ ಪ್ರವರ್ಗ 2ಎ ಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.

ವಿಧಾನಸಭೆ ಅಧಿವೇಶನಕ್ಕೆ ಮುನ್ನ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಅಧಿವೇಶನದ ವೇಳೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ವೆಂಕಟರಾವ್ ಮಾಯಿಂದೆ, ಡಾ. ದಿನಕರ ಮೋರೆ, ದಿಗಂಬರರಾವ್ ಮಾನಕಾರಿ, ನಾರಾಯಣ ಗಣೇಶ, ಶಿವಾಜಿರಾವ್ ಪಾಟೀಲ, ನಾರಾಯಣರಾವ್ ಪಾಟೀಲ, ಪ್ರದೀಪ್ ಬಿರಾದಾರ, ಕಿಶನರಾವ್ ಪಾಟೀಲ, ಬಾಬುರಾವ್ ಕಾರಬಾರಿ, ಅಶೋಕ ಸುಣಜೆ, ಆರ್.ಡಿ. ಬಿರಾದಾರ, ಎಂ.ಜಿ. ರಾಜೋಳೆ, ವೈಜಿನಾಥ ತಗಾರೆ, ಸತೀಶ ವಾಸರೆ, ಸತೀಶ ಸೂರ್ಯವಂಶಿ ಹಾಗೂ ಡಾ. ಪ್ರಕಾಶ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.