ಭಾಲ್ಕಿ: ಕನ್ನಡ ಶಾಲೆಗಳ ರಕ್ಷಣೆ ಹಾಗೂ ಸಬಲೀಕರಣ ಕಾಯ್ದೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಸಂಘ, ಕನ್ನಡ ಸಂರಕ್ಷಣಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಧರಣಿ ನಡೆಸಿದರು.
ನಂತರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಸಲ್ಲಿಸಿ ಮಾತನಾಡಿದ ಪ್ರಮುಖರು,‘ ಸರ್ಕಾರದ ಕಠಿಣ ನಿಯಮಗಳ ಪರಿಣಾಮದಿಂದ ಕಳೆದ ಒಂದು ದಶಕದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿವೆ. ಇನ್ನು ಕೆಲವು ಸೊರಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘1995ರ ನಂತರ ಪ್ರಾರಂಭವಾದ ಅನುದಾನ ರಹಿತ ಖಾಸಗಿ ಶಾಲಾ–ಕಾಲೇಜುಗಳಿಗೆ ಅನುದಾನ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ಸರಳಗೊಳಿಸಬೇಕು. ಬಡ ಮಕ್ಕಳ ದಾಖಲಾತಿಗಾಗಿ ಆರ್‌ಟಿಇ ಖಾಸಗಿ ಶಾಲೆಗಳಿಗೆ ಮರು ಚಾಲನೆ ನೀಡಬೇಕು ಎಂಬುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪ್ರಮುಖರಾದ ಸಂಜುಕುಮಾರ ಜ್ಯಾಂತೆ, ಪ್ರವೀಣ ಹಣಮಶೆಟ್ಟಿ, ಸಂತೋಷ ಖಂಡ್ರೆ, ವಿನೋದ ಜಗತಾಪ, ವಸಂತ ಪಾಟೀಲ, ಅಮರ್ ಹಲ್ಮಂಡಗೆ, ಸೈಯದ್ ಆಶ್ರತ್ ಅಲಿ, ರಾಜಕುಮಾರ್ ಕೆ.ಲಿಂಬಾಶೆಟ್ಟಿ, ಅಕ್ಷಯಕುಮಾರ ಮುದ್ದಾ, ಬಾಲಾಜಿ ಕಾಳೆ, ರೋಹಿತ್ ವೈರಾಗೆ, ಸಿದ್ದರಾಮಯ್ಯ, ಪ್ರಭು ಧೂಪೆ, ನಾಗಭೂಷಣ ಮಾಮಡಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.