ADVERTISEMENT

ಆಡಳಿತ ಪಕ್ಷದಿಂದಲೇ ಪ್ರತಿಭಟನೆ: ಅತಿರೇಕದ ಪರಮಾವಧಿ

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಕಟು ಟೀಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 15:27 IST
Last Updated 4 ನವೆಂಬರ್ 2020, 15:27 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: 'ವಸತಿ ಯೋಜನೆ ಕುರಿತು ಬಹಿರಂಗ ಚರ್ಚೆಗೆ ಬಾರದೆ, ಹೆದರಿ ಹಿಮ್ಮೆಟ್ಟಿದ ಬಿಜೆಪಿ ಸಂಸದ ಭಗವಂತ ಖೂಬಾ ಈಗ ಉತ್ತರಕುಮಾರನಂತೆ ಮೆರೆಯುತ್ತ, ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಮಂಡಿಸುವುದಾಗಿ ಹೇಳಿರುವುದು ಅತಿರೇಕದ ಪರಮಾವಧಿಯಾಗಿದೆ' ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಕಟುವಾಗಿ ಟೀಕಿಸಿದ್ದಾರೆ.

'ಖೂಬಾ ಅವರಿಗೆ ಆಡಳಿತ ಪಕ್ಷದ ಸಂಸದ ಎನ್ನುವುದೇ ಮರೆತು ಹೋದಂತಿದೆ. ಇವರು ಯಾವ ಪುರುಷಾರ್ಥಕ್ಕಾಗಿ ಹಾಗೂ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ, ಬಡ ಫಲಾನುಭವಿಗಳ ವಿರುದ್ಧವೋ, ಸರ್ಕಾರದ ವಿರುದ್ಧವೋ' ಎಂದು ಪ್ರಶ್ನಿಸಿದ್ದಾರೆ.

'ಕಾಂಗ್ರೆಸ್ ಗಣೇಶ ಮೈದಾನದಲ್ಲಿ ಚರ್ಚೆಗೆ ಅನುಮತಿ ಕೋರಿ ಮನವಿ ಸಲ್ಲಿಸಿತ್ತು. ಆದರೆ, ಖೂಬಾ ತಮ್ಮ ಪ್ರಭಾವ ಬೀರಿ ಅನುಮತಿ ಸಿಗದಂತೆ ನೋಡಿಕೊಂಡರು. ಈಗ ತಕ್ಷಣ ಫಲಾನುಭವಿಗಳಿಗೆ ಹಣ ಬಿಡುಗಡೆಗೊಳಿಸಲು ಒತ್ತಾಯಿಸಿ ಕಾಂಗ್ರೆಸ್ ನಡೆಸಲಿರುವ ಪ್ರತಿಭಟನೆಗೂ ಅಡ್ಡಿಪಡಿಸುವ ಹುನ್ನಾರ ನಡೆಸಿದ್ದಾರೆ. ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ' ಎಂದು ಹರಿಹಾಯ್ದಿದ್ದಾರೆ.

ADVERTISEMENT

'ತಮ್ಮ ನೇತೃತ್ವದಲ್ಲಿ ಕೊರೊನಾ ನಿಯಮಾವಳಿ ಪಾಲನೆಯೊಂದಿಗೆ ಪ್ರತಿಭಟನಾ ಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಚಲೋ ನಡೆಯಲಿದೆ. ತಮ್ಮ ಪ್ರತಿಭಟನೆ ವೇಳೆಯೇ ಪ್ರತಿಭಟನೆಗೆ ಮುಂದಾಗಿರುವ ಕೆಲ ಸಮಾಜಘಾತುಕ ಶಕ್ತಿಗಳು ಏನೇ ಪ್ರಚೋದನೆ ಮಾಡಿದರೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನೊಂದ ಫಲಾನುಭವಿಗಳು ಶಾಂತಿ ಕಾಪಾಡಬೇಕು' ಎಂದು ಮನವಿ ಮಾಡಿದ್ದಾರೆ.

'ಖೂಬಾ ಸುಳ್ಳು ದೂರು ಕೊಡಿಸಿ, ಬಡ ಫಲಾನುಭವಿಗಳಿಗೆ 15 ತಿಂಗಳಿಂದ ಕಿರುಕುಳ ಕೊಡುತ್ತಿದ್ದಾರೆ. ಇನ್ನಾದರೂ ತಮ್ಮ ತಪ್ಪು ತಿದ್ದಿಕೊಂಡು ಬಡ ಫಲಾನುಭವಿಗಳಿಗೆ ಬರಬೇಕಾದ ಹಣ ಕೊಡಿಸಿ ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಸರ್ಕಾರ, ಜಿಲ್ಲಾಡಳಿತ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸಿದರೆ ಬರುವ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.