ADVERTISEMENT

ವಸತಿ ಯೋಜನೆಯ ಅರ್ಹ ಫಲಾನುಭವಿಗಳ ಹಣದ ಕಂತು ತಡೆ:18ರಂದು ಭಾಲ್ಕಿಯಲ್ಲಿ ಪ್ರತಿಭಟನೆ

ವಸತಿ ಯೋಜನೆ ಫಲಾನುಭವಿಗಳ ಹಣ ಬಿಡುಗಡೆ ತಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 6:00 IST
Last Updated 15 ನವೆಂಬರ್ 2022, 6:00 IST
ಭಾಲ್ಕಿಯ ಬಿಕೆಐಟಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಈಶ್ವರ ಖಂಡ್ರೆ ಮಾತನಾಡಿದರು
ಭಾಲ್ಕಿಯ ಬಿಕೆಐಟಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಈಶ್ವರ ಖಂಡ್ರೆ ಮಾತನಾಡಿದರು   

ಭಾಲ್ಕಿ: ‘ಕ್ಷೇತ್ರದ ವಸತಿ ಯೋಜನೆಯ ಅರ್ಹ ಫಲಾನುಭವಿಗಳ ಹಣದ ಕಂತು ತಡೆ ಹಿಡಿದಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮ ಖಂಡಿಸಿ ನ.18 ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಬಿಕೆಐಟಿ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾನು ಮಂತ್ರಿಯಿದ್ದ ಸಂದರ್ಭದಲ್ಲಿ ಸುಮಾರು 16 ಸಾವಿರ ಮನೆ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದೇನೆ. ಆದರೆ, ಅಭಿವೃದ್ಧಿ ಸಹಿಸದ ವಿರೋಧಿಗಳ ಷಡ್ಯಂತ್ರ ರೂಪಿಸಿ ಇಲ್ಲಸಲ್ಲದ ದೂರು ನೀಡಿ ಬಡ ಜನರಿಗೆ ಬರಬೇಕಾದ ಹಣವನ್ನು ಸರ್ಕಾರದ ಮಟ್ಟದಲ್ಲಿ ತಡೆ ಹಿಡಿದು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಬಡ ಜನರು ಪ್ರತಿದಿನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇವರ ಶಾಪ ವಿರೋಧಿಗಳಿಗೆ ತಟ್ಟಲಿದೆ ಎಂದರು.

ADVERTISEMENT

ವಸತಿ ಯೋಜನೆ ಹಣ ಬಿಡುಗಡೆಗೆ ಈಗಾಗಲೇ ಹಲವು ಬಾರಿ ಪ್ರತಿಭಟನೆ ಮಾಡಲಾಗಿದೆ. ಆದರೆ, ದಪ್ಪ ಚರ್ಮದ ಸರ್ಕಾರಕ್ಕೆ ಬಡವರ ನೋವು ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ.18ರಂದು ಬೆಳಿಗ್ಗೆ 10.30ಕ್ಕೆ ಭಾಲ್ಕೇಶ್ವರ ಮಂದಿರದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪ್ರಮುಖ ರಸ್ತೆ, ವೃತ್ತಗಳ ಮೂಲಕ ಸಾಗಿಬಂದು ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾವೇಶ ನಡೆಸಲಾಗುವುದು. ವಸತಿ ಯೋಜನೆ ಫಲಾನುಭವಿಗಳು, ಮಹಿಳೆಯರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತರಾವ್ ಚವ್ಹಾಣ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮುಗನೂರ್, ನಗರ ಘಟಕದ ಅಧ್ಯಕ್ಷ ಅಬ್ದುಲ್ ನಸೀರ್, ಪುರಸಭೆ ಅಧ್ಯಕ್ಷ ಅನಿಲ್ ಸುಂಟೆ, ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್, ಸದಸ್ಯ ವಿಜಯಕುಮಾರ, ಅಶೋಕ ಸೋನಜಿ, ಶಿವರಾಜ ಹಾಸನಕರ್ ಹಾಗೂ ಮಡಿವಾಳಪ್ಪ ಮಂಗಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.