ADVERTISEMENT

ಬೀದರ್‌: ಕನ್ನಡಿಗರಿಗೆ ಉದ್ಯೋಗ ಮೀಸಲಿಗೆ ಆಗ್ರಹಿಸಿ ಪ್ರತಿಭಟನೆ

ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:04 IST
Last Updated 19 ಜುಲೈ 2024, 16:04 IST
ಖಾಸಗಿ ಉದ್ದಿಮೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೀದರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಖಾಸಗಿ ಉದ್ದಿಮೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೀದರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಬೀದರ್‌: ಕರ್ನಾಟಕದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ರ್‍ಯಾಲಿ ನಡೆಸಿ ಮನವಿ ಪತ್ರ ಸಲ್ಲಿಸಿದರು. ಮಾರ್ಗದುದ್ದಕ್ಕೂ ಕನ್ನಡಪರವಾದ ಘೋಷಣೆಗಳನ್ನು ಕೂಗಿದರು.

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ. 50 ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ. 75ರಷ್ಟು ಮೀಸಲಾತಿ ಕಡ್ಡಾಯಗೊಳಿಸಿರುವ ಕರಡು ಮಸೂದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದಕ್ಕೆ ಉದ್ಯಮ ರಂಗದ ಪ್ರಮುಖರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಮಸೂದೆ ಮಂಡಿಸಿಲ್ಲ. ಈ ಬಗ್ಗೆ ಇನ್ನೂ ಸಾಕಷ್ಟು ಚರ್ಚೆಯ ಅಗತ್ಯವಿದೆ ಎಂದು ಮಸೂದೆ ಮಂಡಿಸದೇ ಇರುವುದು ಖಂಡನಾರ್ಹ ಎಂದು ತಿಳಿಸಿದರು.

ADVERTISEMENT

ಗ್ರಾಮೀಣ ಪ್ರದೇಶದ ಹಲವರು ಸರ್ಕಾರಿ ಶಾಲೆಯಲ್ಲಿ ಕಲಿತು ಪ್ರತಿಭಾವಂತರಾಗಿ ಹೊರಹೊಮ್ಮಿದ್ದಾರೆ. ಆದರೆ, ಕೆಲಸದಿಂದ ವಂಚಿತರಾಗಿದ್ದಾರೆ. ಕನ್ನಡಿಗರಿಗೆ ಮನ್ನಣೆ ಸಿಗಬೇಕು ಎಂಬ ಮುಖ್ಯಮಂತ್ರಿಯವರ ಆಲೋಚನೆ ಸರಿ ಇದೆ. ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಮುಂತಾದವರು ವಿರೋಧ ವ್ಯಕ್ತಪಡಿಸಿದ್ದಾರೆ. ಇವರ ಕನ್ನಡ ವಿರೋಧಿ ನೀತಿಯನ್ನು ವೇದಿಕೆ ಖಂಡಿಸುತ್ತದೆ ಎಂದು ತಿಳಿಸಿದರು.

ಆಂಧ್ರ ಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲಾಗಿದೆ.  ಸರ್ಕಾರ ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಜಾರಿಗೊಳಿಸಲು ಮೀನಮೇಷ ಮಾಡುತ್ತಿದೆ. ದಶಕಗಳಿಂದ ಈ ರಾಜ್ಯದ ನೆಲ, ನೀರು ಸೇರಿದಂತೆ ಎಲ್ಲ ಸವಲತ್ತುಗಳನ್ನು ರಿಯಾಯತಿ ದರದಲ್ಲಿ ಬಳಸಿಕೊಳ್ಳುತ್ತಿರುವ ಉದ್ದಿಮೆಗಳು ನಾಡ ದ್ರೋಹ ಕಾರ್ಯ ಮಾಡುತ್ತಿವೆ. ರಾಜ್ಯ ಸರ್ಕಾರ ಇವರ ಮಾತಿಗೆ ಕಿವಿಗೊಡದೆ ಮುಂದುವರೆಯಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನೀತಾ ಸಿ.ಬಿ. ಮರಕ, ಪ್ರಮುಖರಾದ ಸೈಯದ್ ನವಾಜ್, ಜಗನಾಥ್ ಕೌಠಾ, ಮೊಸಿನ್ ಪಟೇಲ್, ಗುರುರಾಜ್, ನಾಗೇಶ್ ರಾಯಣೋರ, ಪ್ರದೀಪ್ ಕೋಟೆ, ಪ್ರಕಾಶ್ ಬಗದಲಕರ್, ಪಿಂಟೂ, ವಿಜಯ್ ಕುಮಾರ್, ಸೈಮನ್ ಮೇತ್ರೆ, ನೀಲೇಶ್ ರಾಥೋಡ್, ಶಿವು ಮಡಿವಾಳ, ಯೋಹಾನ್ ಮೀಸೆ, ಆಗಸ್ಟಿನ್ ಮೇತ್ರೆ, ಚಂದ್ರಕಾಂತ್ ಪೋಳ, ಮೋಜೆಸ ಆಣದೂರೆ, ಜಾಫರ್ ಮಿಯ್ಯ, ಅಂಬರೀಶ್ ಜುಲ್ಫಿನೋರ್, ಪ್ರಸಾದ್ ಘೋಡಂಪಳ್ಳಿಕರ್, ಶಿವು ಮೇತ್ರೆ ಹಾಜರಿದ್ದರು.

‘ಖಾಸಗಿ ಕಂಪನಿಗಳ ಒತ್ತಡ’

ಬೀದರ್‌: ರಾಜ್ಯದ ಖಾಸಗಿ ಕಂಪನಿಗಳಲ್ಲಿ ‘ಸಿ‘ ಮತ್ತು ‘ಡಿ’ ಗ್ರುಪ್‌ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸುವ ವಿಧೇಯಕವನ್ನು ಮಂಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಆಗ್ರಹಿಸಿದ್ದಾರೆ. ಖಾಸಗಿ ಕಂಪನಿಗಳ ಒತ್ತಡದಿಂದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದ ವಿಧೇಯಕ ಮಂಡನೆಯಿಂದ ಸರ್ಕಾರ ಹಿಂದೆ ಸರಿದಿರುವುದು ಸರಿಯಲ್ಲ. ಕನ್ನಡಿಗರಿಗೆ ಮೀಸಲಾತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಇರುವ ರಾಜ್ಯದ ಬ್ರ‍್ಯಾಂಡಿಂಗ್‍ಗೆ ಯಾವುದೇ ಧಕ್ಕೆ ಆಗುವುದಿಲ್ಲ. ಖಾಸಗಿ ಕಂಪನಿಗಳು ಬೇರೆಡೆ ಸ್ಥಳಾಂತರಗೊಳ್ಳುವುದೂ ಇಲ್ಲ. ಕೂಡಲೇ ಮಸೂದೆ ಮಂಡಿಸಿ ಕನ್ನಡಿಗರ ಹಿತ ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.