ADVERTISEMENT

ಬೀದರ್: ವೇತನಕ್ಕೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ

ಹೊರ ಗುತ್ತಿಗೆ ನೌಕರರಿಂದ ಮುಖ್ಯಮಂತ್ರಿಗೆ ಮನವಿ ಪತ್ರ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 15:17 IST
Last Updated 7 ಸೆಪ್ಟೆಂಬರ್ 2020, 15:17 IST
ಲಾಕ್‍ಡೌನ್ ಅವಧಿಯ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಿವಿಧ ಶಾಲೆಗಳ ಹೊರ ಗುತ್ತಿಗೆ ಆಧಾರಿತ ಪ್ರಥಮ ದರ್ಜೆ ಸಹಾಯಕರು, ಶುಶ್ರೂಷಕರು ಹಾಗೂ ಗ್ರುಪ್ ಡಿ ನೌಕರರು ಬೀದರ್ ನಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ಲಾಕ್‍ಡೌನ್ ಅವಧಿಯ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಿವಿಧ ಶಾಲೆಗಳ ಹೊರ ಗುತ್ತಿಗೆ ಆಧಾರಿತ ಪ್ರಥಮ ದರ್ಜೆ ಸಹಾಯಕರು, ಶುಶ್ರೂಷಕರು ಹಾಗೂ ಗ್ರುಪ್ ಡಿ ನೌಕರರು ಬೀದರ್ ನಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಬೀದರ್: ಲಾಕ್‍ಡೌನ್ ಅವಧಿಯ ವೇತನ ಪಾವತಿಗೆ ಒತ್ತಾಯಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಶಾಲೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕರು, ಶುಶ್ರೂಷಕರು ಹಾಗೂ ಗ್ರುಪ್ ಡಿ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ಹಾಗೂ ಏಕಲವ್ಯ ಸೇರಿ ಜಿಲ್ಲೆಯಲ್ಲಿ 29 ವಸತಿ ಶಾಲೆಗಳು ಇವೆ. ಪ್ರಥಮ ದರ್ಜೆ ಸಹಾಯಕರು, ಶುಶ್ರೂಷಕರು, ಗ್ರುಪ್ ಡಿ ಸೇರಿ ಸುಮಾರು 400 ನೌಕರರು 8-10 ವರ್ಷಗಳಿಂದ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ನೌಕರರಲ್ಲಿ ಅಧಿಕ ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಬಡವರಾಗಿರುವ ಇವರು ಕುಟುಂಬ ನಿರ್ವಹಣೆಗೆ ನೌಕರಿಯನ್ನೇ ನಂಬಿಕೊಂಡಿದ್ದಾರೆ ಎಂದು ತಿಳಿಸಿದರು.

ಲಾಕ್‍ಡೌನ್‍ನ ಏಪ್ರಿಲ್, ಮೇ, ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ವೇತನ ಪಾವತಿಸದ ಕಾರಣ ನೌಕರರ ಕುಟುಂಬಗಳು ಬೀದಿಗೆ ಬಂದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‍ಡೌನ್ ಅವಧಿಯ ವೇತನ ನೀಡುವಂತೆ ಆದೇಶ ನೀಡಿದ್ದರೂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.

ಐದು ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸದ್ಯದ ಶಾಲೆಗಳಲ್ಲೇ ಸೇವೆ ಮುಂದುವರಿಸಬೇಕು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ವೇತನ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪ್ರಥಮ ದರ್ಜೆ ಸಹಾಯಕರು ಹಾಗೂ ಶುಶ್ರೂಷಕರ (ಹೊರ ಸಂಪನ್ಮೂಲ) ಸಂಘದ ರಾಜ್ಯ ಗೌರವಾಧ್ಯಕ್ಷ ಜಗನ್ನಾಥ ಬಿರಾದಾರ, ಜಿಲ್ಲಾ ಘಟಕದ ಗೌರವಾಧ್ಯಕ್ಷ ರಾಜಕುಮಾರ ಜಟಗೊಂಡ, ಅಧ್ಯಕ್ಷ ಗೋಪಾಲ ಕುಲಕರ್ಣಿ, ಉಪಾಧ್ಯಕ್ಷರಾದ ಗಿರಿ ನಾಗರಾಜ ಮುಸ್ಲಿ, ಕಲ್ಲಪ್ಪ ಮೋಳಕೇರೆ, ವಸಂತ ರಾಠೋಡ್, ಅಮೃಪಾಲಿ ಎ. ಸಿಂಧೆ, ಪ್ರಧಾನ ಕಾರ್ಯದರ್ಶಿ ರಜನಿಕಾಂತ ಸಿಂಧೆ, ಕಾರ್ಯದರ್ಶಿ ಸೋಮಶೇಖರ ಬಿರಾದಾರ, ಜಂಟಿ ಕಾರ್ಯದರ್ಶಿ ಸಿದ್ದು ಶೆಟಕಾರ, ಖಜಾಂಚಿ ಮೈಲಾರಪ್ಪ ಬುಕ್ಕಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.