ADVERTISEMENT

ಬೀದರ್: ಸತ್ತ ಕುರಿಯೊಂದಿಗೆ ಪ್ರತಿಭಟನೆ

ಪರಿಹಾರ ಯೋಜನೆ ಮುಂದುವರಿಕೆಗೆ ಒತ್ತಾಯಿಸಿ ಕುರಿಗಾರರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 16:49 IST
Last Updated 23 ನವೆಂಬರ್ 2020, 16:49 IST
ಬೀದರ್‌ನಲ್ಲಿ ಸೋಮವಾರ ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ಬೀದರ್‌ನಲ್ಲಿ ಸೋಮವಾರ ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು   

ಬೀದರ್: ಆಕಸ್ಮಿಕ ಮರಣ ಹೊಂದುವ ಕುರಿ ಹಾಗೂ ಮೇಕೆಗಳಿಗೆ ಪರಿಹಾರ ನೀಡುವ ಯೋಜನೆ ಮುಂದುವರಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಕುರಿಗಾರರು ನಗರದಲ್ಲಿ ಸೋಮವಾರ ಸತ್ತ ಕುರಿಯೊಂದಿಗೆ ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಸಾಯಿ ಆದರ್ಶ ಶಾಲೆ ಆವರಣದಲ್ಲಿ ಸೇರಿ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ ಅವರ ನೇತೃತ್ವದಲ್ಲಿ ಜನರಲ್ ಕಾರ್ಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸತ್ತ ಕುರಿ ಇಟ್ಟು ಕೆಲ ಕಾಲ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ADVERTISEMENT

ಸರ್ಕಾರ ಹಿಂದೆ ಆಕಸ್ಮಿಕ ಮರಣ ಹೊಂದುವ ಕುರಿ ಮತ್ತು ಮೇಕೆ ಹಾಗೂ ಅವುಗಳ ಮರಿಗಳಿಗೆ ಪರಿಹಾರ ನೀಡುವ ಯೋಜನೆ ಜಾರಿಗೆ ತಂದಿತ್ತು. ಕೆಲ ನಿಗದಿತ ಕಾರಣ ಹಾಗೂ ರೋಗಗಳಿಂದ ಮರಣ ಹೊಂದುವ 3 ರಿಂದ 6 ತಿಂಗಳ ಮರಿಗಳಿಗೆ ₹ 2,500 ಹಾಗೂ 6 ತಿಂಗಳ ಮೇಲ್ಪಟ್ಟ ಕುರಿ ಹಾಗೂ ಮೇಕೆಗಳಿಗೆ ₹ 5 ಸಾವಿರ ಪರಿಹಾರ ಕೊಡಲಾಗುತ್ತಿತ್ತು. ಆದರೆ, ಪ್ರಸ್ತುತ ಸರ್ಕಾರ ಯಾವುದೇ ಅನುದಾನ ನೀಡದ ಕಾರಣ ಯೋಜನೆ ಅನುಷ್ಠಾನವಾಗುತ್ತಿಲ್ಲ. ಕೂಡಲೇ ಅಗತ್ಯ ಅನುದಾನ ಒದಗಿಸಿ ಯೋಜನೆ ಮುಂದುವರಿಸಬೇಕು ಎಂದು ಪಂಡಿತರಾವ್ ಚಿದ್ರಿ ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಎನ್‍ಸಿಡಿಸಿ ಯೋಜನೆಯಡಿ 25 ಸಾವಿರ ಕುರಿ ಸಾಕಾಣಿಕೆದಾರರಿಗೆ ₹ 187.50 ಕೋಟಿ ಆರ್ಥಿಕ ನೆರವು ಕಲ್ಪಿಸಲು ರಾಜ್ಯ ಸರ್ಕಾರ 2018-19ನೇ ಸಾಲಿನ ಬಜೆಟ್‍ನಲ್ಲಿ ಖಾತರಿ ಒದಗಿಸುವ ಭರವಸೆ ನೀಡಿತ್ತು. ಅದರಂತೆ ಕೂಡಲೇ ಖಾತರಿ ಕೊಟ್ಟು ಕುರಿಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೇಡಿಕೆ ಮಂಡಿಸಿದರು.

ಕುರಿ ಮತ್ತು ಮೇಕೆಗಳಿಗೆ ಜಂತುನಾಶಕ ಔಷಧಿ ಪೂರೈಸಬೇಕು. ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಅವಕಾಶ ನೀಡಿದ ಕಾರಣ ಅರಣ್ಯ ಕುರಿಗಾರರು ತೊಂದರೆ ಅನುಭವಿಸುತ್ತಿದ್ದು, ತಕ್ಷಣ ಅವರ ಸಮಸ್ಯೆ ಪರಿಹರಿಸಬೇಕು. ಎಲ್ಲ ಡಿಸಿಸಿ ಬ್ಯಾಂಕ್‍ಗಳಲ್ಲೂ ಕುರಿಗಾರರಿಗೆ ಸದಸ್ಯತ್ವ ನೀಡಬೇಕು ಎಂದು ಆಗ್ರಹಿಸಿದರು.

ಕುರಿಗಾರರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಮೊದಲ ಹಂತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಎರಡನೇ ಹಂತದಲ್ಲಿ ಆಯಾ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲಾಗುವುದು. ಮೂರನೇ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳಾದ ಪಂಡಿತ ಕೌಠಾ, ಶಿವಕುಮಾರ ಬೆಳಕೇರಿ, ಕಲ್ಲಪ್ಪ ಯರನಳ್ಳಿ, ಕಲ್ಲಪ್ಪ ಹೊಳಸಮುದ್ರ, ದೀಪಕ ಹೊಳಸಮುದ್ರ, ಶರಣಪ್ಪ ಹೆಡಗಾಪುರ, ನಾಗನಾಥ ರಕ್ಷಾಳ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.