ADVERTISEMENT

ಕೈಗಾರಿಕೆ ಪ್ರದೇಶಕ್ಕೆ ಮೂಲಸೌಕರ್ಯ ಒದಗಿಸಿ: ಸಂಸದ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 14:29 IST
Last Updated 25 ಫೆಬ್ರುವರಿ 2020, 14:29 IST
ಬೀದರ್‌ನ ಸಹಾರ್ದ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯಗಳ ಲಭ್ಯತೆ ಕುರಿತ ಸಭೆಯಲ್ಲಿ ಸಂಸದ ಭಗವಂತ ಖೂಬಾ ಮಾತನಾಡಿದರು. ಬಿ.ಜಿ.ಶೆಟಕಾರ, ಸುರೇಖಾ ಮುನೋಳಿ ಇದ್ದಾರೆ
ಬೀದರ್‌ನ ಸಹಾರ್ದ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯಗಳ ಲಭ್ಯತೆ ಕುರಿತ ಸಭೆಯಲ್ಲಿ ಸಂಸದ ಭಗವಂತ ಖೂಬಾ ಮಾತನಾಡಿದರು. ಬಿ.ಜಿ.ಶೆಟಕಾರ, ಸುರೇಖಾ ಮುನೋಳಿ ಇದ್ದಾರೆ   

ಬೀದರ್‌: ‘ಹಿಂದೆ ಕೆಲ ಉದ್ಯಮಿಗಳು ಬೀದರ್‌ನಲ್ಲಿ ಬಂಡವಾಳ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅನೇಕ ಶ್ರೀಮಂತರಿದ್ದರೂ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಹೀಗಾಗಿ ನವ ಉದ್ಯಮಿಗಳು ಜಿಲ್ಲೆಗೆ ಬರುವಂತಾಗಲುಕೈಗಾರಿಕೆ ಪ್ರದೇಶಕ್ಕೆ ಮೂಲಸೌಕರ್ಯದ ವ್ಯವಸ್ಥೆ ಮಾಡಬೇಕು’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ಇಲ್ಲಿಯ ಸಹಾರ್ದ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯಗಳ ಲಭ್ಯತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

‘ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಬಂದಾಗ ಅಧಿಕಾರಿಗಳ ಬಳಿ ಎಲ್ಲ ಬಗೆಯ ಮಾಹಿತಿ ಇರಬೇಕು. ಉದ್ಯಮ ಆರಂಭಕ್ಕೆ ಅಗತ್ಯವಿರುವ ಮೂಲಸೌಕರ್ಯದ ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಬದಲಾವಣೆಗೆ ಹೊಂದಿಕೊಳ್ಳದೆ ಹಳೆಯ ಕತೆಗಳನ್ನು ಹೇಳುತ್ತ ಕುಳಿತುಕೊಳ್ಳಬಾರದು’ ಎಂದು ಹೇಳಿದರು.

ADVERTISEMENT

‘ಹೊಸ ಉದ್ಯಮಿಗಳು ಬೀದರ್‌ ಜಿಲ್ಲೆಗೆ ಬಂದು ಮೂಲಸೌಕರ್ಯಗಳ ಕೊರತೆಯಿಂದ ಮರಳಿ ಹೋಗುವಂತಾಗಬಾರದು. ನವ ಉದ್ಯಮಿಗಳಲ್ಲಿ ಸುರಕ್ಷತೆಯ ಭಾವ ಮೂಡಿಸಬೇಕು. ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು’ ಎಂದು ತಿಳಿಸಿದರು.

‘1990ರ ದಶಕದಲ್ಲಿ ಕೆಎಸ್‌ಎಫ್‌ಸಿ ಅಧಿಕಾರಿಗಳು ಲಂಚ ಕೊಟ್ಟವರಿಗೆ ಮಾತ್ರ ಉದ್ಯಮ ಆರಂಭಕ್ಕೆ ಅನುಮತಿ ಕೊಡುತ್ತಿದ್ದರು. ಪ್ರಸ್ತುತ ಅಂತಹ ಪರಿಸ್ಥಿತಿ ಇಲ್ಲ. ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ದಿಸೆಯಲ್ಲಿ ಅಧಿಕಾರಿಗಳು ಯೋಜನೆ ರೂಪಿಸಬೇಕು’ ಎಂದು ಸೂಚಿಸಿದರು.

ಕಲಬುರ್ಗಿಯ ಎಂಎಸ್‌ಎಂಇ ಡೆವೆಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್ ಹಾಗೂ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ‘ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹೊಸ ಯೋಜನೆಗಳನ್ನು ಅಧಿಕಾರಿಗಳು ಸಿದ್ಧಪಡಿಸುತ್ತಿಲ್ಲ. ನನ್ನೊಂದಿಗೆ ಸಮಾಲೋಚನೆಯನ್ನೂ ನಡೆಸಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಇದೆ’ ಎಂದರು.

‘ಇಲ್ಲಿಯ ಕೈಗಾರಿಕೆ ಪ್ರದೇಶದಲ್ಲಿ 5 ಎಂ.ಎಲ್‌.ಡಿ ನೀರಿನ ಅಗತ್ಯವಿದೆ. ಕೈಗಾರಿಕೆ ಪ್ರದೇಶಕ್ಕೆ ಕಾರಂಜಾ ಜಲಾಶಯದಿಂದ ನೀರು ಪೂರೈಸಲು ₹25 ಕೋಟಿ ಅಗತ್ಯವಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಸುರೇಖಾ ಮುನೋಳಿ ತಿಳಿಸಿದರು.

ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ವಾಯುಪಡೆ ತರಬೇತಿ ಕೇಂದ್ರದಿಂದಲೂ ಅನುಮತಿ ಪಡೆಯುವ ಅಗತ್ಯ ಇದೆ. ವಾಯುಪಡೆಯವರು ಚಿಮಣಿ(ಬಾಯ್ಲರ್) ಅಳವಡಿಸಲು ಅನುಮತಿ ಕೊಡುತ್ತಿಲ್ಲ. ಹೊಸ ವಿಧಾನದ ಚಿಮಣಿ ಅಳವಡಿಸುವಂತೆ ಸೂಚಿಸುತ್ತಿದ್ದಾರೆ ಎಂದು ಕೆಐಡಿಬಿ ಅಧಿಕಾರಿಗಳು ಹೇಳಿದರು.

‘ಪರಿಸರ ಮಾಲಿನ್ಯ ತಡೆಗೆ ರಾಜ್ಯ ಸರ್ಕಾರ ₹ 44 ಕೋಟಿ ವೆಚ್ಚದ ಯೋಜನೆ ರೂಪಿಸಿದೆ. 2018ರಲ್ಲಿ ಘಟಕಕ್ಕೆ ಅನುದಾನ ಬಿಡುಗಡೆಯಾದರೂ ಬೆಂಗಳೂರು ಮೂಲದ ಗುತ್ತಿಗೆದಾರ ಕಾಮಗಾರಿಯನ್ನೇ ಪೂರ್ಣಗೊಳಿಸಿಲ್ಲ. 2019ರಲ್ಲೇ ಯೋಜನೆ ಪೂರ್ಣಗೊಳ್ಳಬೇಕಿತ್ತು’ ಎಂದು ಕೆಐಡಿಬಿ ಅಧಿಕಾರಿ ಅನಿಲ ರಾಠೋಡ ತಿಳಿಸಿದರು.

‘ಬೀದರ್, ಹುಮನಾಬಾದ್‌ ಹಾಗೂ ಬಸವಕಲ್ಯಾಣ ಕೈಗಾರಿಕೆ ಪ್ರದೇಶದಲ್ಲಿನ ಕೆಲ ಉದ್ಯಮಗಳು ಬಂದ್‌ ಆಗಿವೆ. ಬ್ಯಾಂಕುಗಳು ಸಾಲ ಮರುಪಾವತಿಗೆ ಕಾಲಾವಕಾಶ ಕೊಡುತ್ತಿಲ್ಲ ಎನ್ನುವ ದೂರುಗಳು ಸಹ ಇವೆ’ ಎಂದು ತಿಳಿಸಿದರು.
‘ನವ ಉದ್ಯಮಿಗಳಿಗೆ ತಾಂತ್ರಿಕ ಮಾರ್ಗದರ್ಶನ, ಕಚ್ಚಾ ವಸ್ತುಗಳ ಲಭ್ಯತೆ ಹಾಗೂ ಮಾರುಕಟ್ಟೆಯ ಮಾಹಿತಿ ಒದಗಿಸಲಾಗುತ್ತಿದೆ’ ಎಂದು ಎಂಎಸ್‌ಎಂಇ ಸಹಾಯಕ ನಿರ್ದೇಶಕ ಬಿ.ಎಸ್‌.ಜವಳಿ ತಿಳಿಸಿದರು.

ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ ಮಾತನಾಡಿ, ‘ಬಿದರಿ ಕಲಾಕೃತಿಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಮಧ್ಯವರ್ತಿಗಳ ಹಾವಳಿಯಿಂದ ಕುಶಲಕರ್ಮಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಬಿದರಿ ಕಲಾಕೃತಿಗಳ ಮಾರಾಟದಿಂದ ಬರುವ ಲಾಭ ಅನ್ಯರ ಪಾಲಾಗುತ್ತಿದೆ. ಇದೇ ಕಾರಣಕ್ಕೆ ಬಿದರಿ ಕುಶಲಕರ್ಮಿಗಳು ತಮ್ಮ ಮಕ್ಕಳನ್ನು ಆ ವೃತ್ತಿಯಲ್ಲಿ ತೊಡಗಿಸುತ್ತಿಲ್ಲ’ ಎಂದು ತಿಳಿಸಿದರು.
ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ ಹಲಶೆಟ್ಟಿ, ಎಸ್‌.ಸಿ., ಎಸ್‌.ಟಿ. ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ವಿಜಯಕುಮಾರ, ಬೀದರ್‌ ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್ ಬಿ.ಎಂ.ಕಮತಗಿ ಇದ್ದರು.

ರಿಯಲ್‌ ಎಸ್ಟೇಟ್‌ ದಂಧೆ ನಿಲ್ಲಲಿ

ಬೀದರ್‌:‘ಕೈಗಾರಿಕೆ ಪ್ರದೇಶಗಳಲ್ಲಿರುವ ಕೆಲ ನಿವೇಶನಗಳಲ್ಲಿ ಇಂದಿಗೂ ಕೈಗಾರಿಕೆಗಳು ಆರಂಭವಾಗಿಲ್ಲ. ಕೆಲವರು ಯಾವ ಉದ್ದೇಶಕ್ಕೆ ನಿವೇಶನ ಪಡೆದುಕೊಂಡಿದ್ದಾರೆಯೋ ಆ ಉದ್ದೇಶಕ್ಕೆ ಅದನ್ನು ಬಳಸಿಕೊಳ್ಳುತ್ತಿಲ್ಲ. ರಿಯಲ್‌ ಎಸ್ಟೇಟ್‌ ದಂಧೆ ನಡೆದಿದ್ದರೆ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಸಂಸದ ಭಗವಂತ ಖೂಬಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಅಧಿಕಾರಿಗಳು ಬಾಗಿಲು ಮುಚ್ಚಿರುವ ಕೈಗಾರಿಕೆಗಳ ಮಾಹಿತಿ ಪಡೆಯಬೇಕು. ಕೈಗಾರಿಕೆಗಳು ನಡೆಯದಿದ್ದರೆ ಬೇರೆಯವರಿಗೆ ನಡೆಸಲು ಅವಕಾಶ ಕಲ್ಪಿಸಬೇಕು. ಅಥವಾ ಹೊಸ ಉದ್ಯಮಿಗಳಿಗೆ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.

ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಸಂಸದ ಭೇಟಿ

ಬೀದರ್‌: ಜಲ ಮಾಲಿನ್ಯ ತಡೆಯಲು ನೌಬಾದ್‌ ಕೈಗಾರಿಕೆ ಪ್ರದೇಶದಲ್ಲಿ ₹ 44 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಸಂಸದ ಭಗವಂತ ಖೂಬಾ ಭೇಟಿ ನೀಡಿ ಪರಿಶೀಲಿಸಿದರು.

‘2019ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಮೂರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.