ADVERTISEMENT

ಬೀದರ್: ಬಜೆಟ್‌ ಅಭಿಪ್ರಾಯಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 14:59 IST
Last Updated 1 ಫೆಬ್ರುವರಿ 2021, 14:59 IST
ಚೇತನ್‌ ಸೋರಳ್ಳಿ
ಚೇತನ್‌ ಸೋರಳ್ಳಿ   

ಬೀದರ್: ಪಶು ಪಾಲನೆಗೆ ಉತ್ತೇಜನ ನೀಡಲು ಕೇಂದ್ರ ಬಜೆಟ್‍ನಲ್ಲಿ ರೂ. 16.5 ಲಕ್ಷ ಕೋಟಿ ಸಾಲ ಯೋಜನೆಗೆ ಉದ್ದೇಶಿಸಿರುವುದು ಸಂತಸ ತಂದಿದೆ. ಪಶು ಸಂಗೋಪನೆ, ಡೇರಿ ಮತ್ತು ಮೀನುಗಾರಿಕೆಗೆ ಸಾಲ ಒದಗಿಸಲು ಅವಕಾಶ ಕಲ್ಪಿಸಿದ್ದು, ಪಶು ಪಾಲನೆ, ಡೇರಿ ಹಾಗೂ ಮೀನು ಸಾಕಾಣಿಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ.

ಪಶು ಪಾಲನೆಗೆ ಉತ್ತೇಜನ
ಬೀದರ್:
ಪಶು ಪಾಲನೆಗೆ ಉತ್ತೇಜನ ನೀಡಲು ಕೇಂದ್ರ ಬಜೆಟ್‍ನಲ್ಲಿ ರೂ. 16.5 ಲಕ್ಷ ಕೋಟಿ ಸಾಲ ಯೋಜನೆಗೆ ಉದ್ದೇಶಿಸಿರುವುದು ಸಂತಸ ತಂದಿದೆ. ಪಶು ಸಂಗೋಪನೆ, ಡೇರಿ ಮತ್ತು ಮೀನುಗಾರಿಕೆಗೆ ಸಾಲ ಒದಗಿಸಲು ಅವಕಾಶ ಕಲ್ಪಿಸಿದ್ದು, ಪಶು ಪಾಲನೆ, ಡೇರಿ ಹಾಗೂ ಮೀನು ಸಾಕಾಣಿಕೆದಾರರಿಗೆ ಹೆಚ್ಚು ಅನುಕೂಲವಾಗಲಿದೆ.

ಪಶು ಪಾಲನೆ, ಹೈನುಗಾರಿಕೆ, ಕುಕ್ಕುಟ ಉದ್ಯಮದ ಅನುದಾನ ರೂ. 30 ಸಾವಿರ ಕೋಟಿಯಿಂದ ರೂ. 40 ಸಾವಿರ ಕೋಟಿಗೆ ಹೆಚ್ಚಳ ಮಾಡಿರುವುದು ಈ ಉದ್ಯಮ ಆರಂಭಿಸುವವರಲ್ಲಿ ಹೊಸ ಆಶಾ ಭಾವ ಮೂಡಿಸಿದೆ. ಕೋವಿಡ್‍ನಿಂದ ದೇಶ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿನ ಕೇಂದ್ರ ಬಜೆಟ್ ಆಶಾದಾಯಕವಾಗಿದೆ. ದೇಶವನ್ನು ಸಂಕಷ್ಟದಿಂದ ಪಾರು ಮಾಡಲಿದೆ.
–ಪ್ರಭು ಚವಾಣ್, ಜಿಲ್ಲಾ ಉಸ್ತುವಾರಿ ಸಚಿವ

ADVERTISEMENT

***

ಅಭಿವೃದ್ಧಿ ಪರ ಬಜೆಟ್
ಬೀದರ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಅಭಿವೃದ್ಧಿ ಹಾಗೂ ಜನ ಪರವಾಗಿದೆ.
ಆರೋಗ್ಯ, ಶಿಕ್ಷಣ, ಮಧ್ಯಮ ವರ್ಗದ ಕೈಗಾರಿಕೆಗಳು ಹಾಗೂ ಎಲ್ಲ ವರ್ಗದ ಜನರ ಅಭಿವೃದ್ಧಿ ಮತ್ತು ದೇಶದ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸುವ ಬಜೆಟ್ ಇದಾಗಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೆ ಶುದ್ಧ ಕುಡಿಯುವ ನೀರಿಗಾಗಿ ಜಲಜೀವನ ಮಿಷನ್ ಯೋಜನೆಗೆ ರೂ. 2.87 ಲಕ್ಷ ಕೋಟಿ, ಪಶು ಸಂಗೋಪನೆ, ಡೇರಿ ಹಾಗೂ ಮೀನುಗಾರಿಕೆಗೆ ರೂ. 40 ಸಾವಿರ ಕೋಟಿ ಮೀಸಲಿರಿಸಿರುವುದು ಉತ್ತಮ ಬೆಳವಣಿಗೆ. ಸ್ಟಾರ್ಟ್ ಅಪ್ ಸರಳೀಕರಣ ಮಾಡಲಾಗಿದೆ. ನಾಲ್ಕು ವರ್ಷಗಳ ವರೆಗೆ ಆದಾಯ ತೆರಿಗೆ ವಿನಾಯಿತಿ ಕಲ್ಪಿಸಲಾಗಿದೆ. ಭಾರತ ಮಾಲಾ ಯೋಜನೆಯಡಿ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ. ಯೋಜನೆಯಡಿ ರೂ. 3.3 ಕೋಟಿ ಅನುದಾನ ಮೀಸಲಿಡಲಾಗಿದೆ.
–ಭಗವಂತ ಖೂಬಾ, ಸಂಸದ

***
ಗಾಯದ ಮೇಲೆ ಬರೆ ಎಳೆದ ಬಜೆಟ್
ಬೀದರ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಪ್ರಸಕ್ತ ವರ್ಷದ ಬಜೆಟ್ ಜನರ ಗಾಯದ ಮೇಲೆ ಬರೆ ಎಳೆದಿದೆ.
ರೈತರ ಕಷ್ಟ ದೂರ ಮಾಡಲು ಸಾಲ ಮನ್ನಾ ಮಾಡಿಲ್ಲ. ಕೃಷಿ ಮೇಲೆ ಶೇ 2.5 ರಿಂದ ಶೇ 100 ರಷ್ಟು ಸೆಸ್ ಹಾಕಲಾಗಿದೆ. ಪೆಟ್ರೋಲ್ ಡೀಸೆಲ್ ಮೇಲಿನ ತೇರಿಗೆ ಹೆಚ್ಚಿಸಲಾಗಿದೆ. ಉದ್ಯೋಗ ಸೃಷ್ಟಿಸುವ ಯುವ ಜನರ ನಿರೀಕ್ಷೆ ಹುಸಿಯಾಗಿದೆ. ಒಂದು ಕಡೆ ರಿಯಾಯಿತಿ ಒದಗಿಸಿ ಮತ್ತೊಂದು ಕಡೆ ತೆರಿಗೆ ಹಾಕುವ ಮೂಲಕ ಜನರ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಲಾಗಿದೆ. ಸರ್ಕಾರಿ ನೌಕರರಿಗೆ ತೆರಿಗೆ ಹಾಕಿ ಬಿಸಿ ಮುಟ್ಟಿಸಲಾಗಿದೆ. ಚುನಾವಣೆ ಕಾರಣ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಮಲತಾಯಿ ಧೋರಣೆ ತೋರಲಾಗಿದೆ. ಆತ್ಮವಂಚನೆ ಬಜೆಟ್ ಇದಾಗಿದೆ.
–ಅರವಿಂದಕುಮಾರ ಅರಳಿ, ವಿಧಾನ ಪರಿಷತ್ ಸದಸ್ಯ

***
ಭರವಸೆಯ ಬಜೆಟ್
ಬೀದರ್‌: ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಪೂರಕವಾದ, ಸಶಕ್ತ ಭಾರತದ ಭರವಸೆಯ ಬಜೆಟ್ ಮಂಡಿಸಿದೆ. 11 ಸಾವಿರ ಕಿ.ಮೀ. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, 15 ಸಾವಿರ ಶಾಲೆಗಳ ಉನ್ನತೀಕರಣ, 17 ಸಾವಿರ ಹೊಸ ಗ್ರಾಮೀಣ ಆಸ್ಪತ್ರೆ, 602 ಜಿಲ್ಲೆಗಳಲ್ಲಿ ಆಧುನಿಕ ಆಸ್ಪತ್ರೆ ನಿರ್ಮಿಸಲು ಯೋಜನೆ ಹಮ್ಮಿಕೊಂಡಿರುವುದು ಸ್ವಾಗರ್ತಹವಾಗಿದೆ.
–ಚೇತನ್‌ ಸೋರಳ್ಳಿ ಸೋರಳ್ಳಿ, ಆಣದೂರಿನ ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ

****
ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡಬೇಕಿತ್ತು
ಬೀದರ್‌:
ಮಹಿಳಾ ಸಬಲೀಕರಣಕ್ಕೆ ಪೂರಕವಾದ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಒತ್ತು ಕೊಡಬೇಕಿತ್ತು. ಕೋವಿಡ್‌ನಿಂದಾಗಿ ಹಲವು ಸಮಸ್ಯೆಗಳು ಎದುರಾಗಿದ್ದು, ಅವುಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಯೋಜನೆ ರೂಪಿಸಬೇಕಿತ್ತು.
–ಜಯಶ್ರೀ ಸುಕಾಲೆ, ಸಾಹಿತಿ, ಬೀದರ್‌

***
ಅಗತ್ಯ ವಸ್ತುಗಳ ಮೇಲೆ ತೆರಿಗೆ ಭಾರ
ಬೀದರ್:
ಬಜೆಟ್‌ನಲ್ಲಿ ಅಗತ್ಯ ವಸ್ತುಗಳ ಮೇಲೆ ತೆರಿಗೆ ಭಾರ ಹಾಕಲಾಗಿದೆ. ಕೋವಿಡ್‌ನಿಂದಾಗಿ ಜನ ಸಾಮಾನ್ಯರ ಆದಾಯದಲ್ಲಿ ಹೆಚ್ಚಳವಾಗಿಲ್ಲ. ಆದರೆ, ಪೆಟ್ರೋಲ್‌, ಡೀಸೆಲ್ ಹಾಗೂ ಕೃಷಿ ಉತ್ಪನ್ನಗಳ ತೆರಿಗೆಯಲ್ಲಿ ಹೆಚ್ಚಳ ಮಾಡಿರುವ ಕಾರಣ ಬರುವ ದಿನಗಳಲ್ಲಿ ಬಡವರು ಇನ್ನಷ್ಟು ಕಷ್ಟ ಎದುರಿಸಲಿದ್ದಾರೆ.
–ರಜಿಯಾ ಬಳಬಟ್ಟಿ, ಸಾಮಾಜಿಕ ಕಾರ್ಯಕರ್ತೆ, ಬೀದರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.