ADVERTISEMENT

ರೇಬಿಸ್‍ನಿಂದ ಪ್ರತಿ ವರ್ಷ 20 ಸಾವಿರ ಮಂದಿ ಸಾವು: ಡಾ.ಸಮುದ್ರ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 4:37 IST
Last Updated 7 ಅಕ್ಟೋಬರ್ 2025, 4:37 IST
ಬೀದರ್‌ನ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೇಬಿಸ್ ಜಾಗೃತಿ ಕಾರ್ಯಕ್ರಮ ಜರುಗಿತು
ಬೀದರ್‌ನ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೇಬಿಸ್ ಜಾಗೃತಿ ಕಾರ್ಯಕ್ರಮ ಜರುಗಿತು   

ಬೀದರ್: ‘ರೇಬಿಸ್‍ನಿಂದ ದೇಶದಲ್ಲಿ ಪ್ರತಿ ವರ್ಷ 20,562 ಮಂದಿ ಸಾವನ್ನಪ್ಪುತ್ತಿದ್ದಾರೆ’ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಮುದ್ರ ಕುಲಕರ್ಣಿ ತಿಳಿಸಿದರು.

ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ರೇಬಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ವಾರ್ಷಿಕ ಸಾವುಗಳಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ ಶೇ 40ರಷ್ಟಿದೆ’ ಎಂದರು.

‘ದೇಶದಲ್ಲಿ ನಾಯಿ ಕಡಿತವೇ ರೇಬಿಸ್‍ಗೆ ಪ್ರಮುಖ ಕಾರಣವಾಗಿದೆ. ಮಾರಣಾಂತಿಕ ರೇಬಿಸ್ ವೈರಸ್ ಮನುಷ್ಯನ ಮೆದುಳು ಹಾಗೂ ನರ ಮಂಡಲಕ್ಕೆ ಹಾನಿ ಉಂಟು ಮಾಡುತ್ತದೆ’ ಎಂದು ಹೇಳಿದರು.

ADVERTISEMENT

‘ನಾಯಿ ಸೇರಿದಂತೆ ಸೋಂಕಿತ ಪ್ರಾಣಿ ಕಚ್ಚುವುದು, ಜೊಲ್ಲು, ಉಗುಳಿನ ಸಂಪರ್ಕದಿಂದ ರೇಬಿಸ್ ಹರಡುತ್ತದೆ. ಪ್ರಾಣಿಗಳಲ್ಲಿ ಅಸಾಮಾನ್ಯ ಆಕ್ರಮಣಶೀಲತೆ, ಹೆದರಿಕೆ, ಅತಿಯಾಗಿ ಜೊಲ್ಲು ಸೋರುವಿಕೆ, ನುಂಗಲು ತೊಂದರೆ, ನೀರು ನೋಡಿ ಹೆದರುವುದು, ಅಂಗವೈಕಲ್ಯ ರೋಗದ ಲಕ್ಷಣಗಳಾಗಿವೆ’ ಎಂದು ತಿಳಿಸಿದರು.

‘ರೇಬಿಸ್ ತಡೆಗಟ್ಟಲು ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ನೀಡಬೇಕು. ಅಲೆದಾಡುವ, ಕಾಡು ಪ್ರಾಣಿಗಳ ಸಂಪರ್ಕ ತಪ್ಪಿಸಬೇಕು. ಪ್ರಾಣಿಗಳ ಅನುಮಾನಾಸ್ಪದ ವರ್ತನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರಾಣಿ ಕಚ್ಚಿದರೆ ಅಥವಾ ಪರಚಿದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ಆರ್.ಡಿ.ಸಿಂಗ್, ಪ್ರಾಚಾರ್ಯೆ ವೀಣಾ ಸೋರಗಾವಿ, ಯೋಗೇಂದ್ರ ಕುಲಕರ್ಣಿ, ವಿಕ್ರಮ ಚಾಕೋತೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.