ADVERTISEMENT

ಕೆರೆ, ನಾಲೆಗಳಿಗೆ ಬಾರದ ನೀರು

ಮಳೆ ಆರಂಭವಾದರೂ ಬಾವಿ, ಕೊಳವೆಬಾವಿಗಳಲ್ಲಿ ನೀರಿಲ್ಲ

ಮಾಣಿಕ ಆರ್ ಭುರೆ
Published 11 ಜುಲೈ 2020, 5:53 IST
Last Updated 11 ಜುಲೈ 2020, 5:53 IST
ಬಸವಕಲ್ಯಾಣದ ತ್ರಿಪುರಾಂತ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹಗೊಂಡಿದೆ
ಬಸವಕಲ್ಯಾಣದ ತ್ರಿಪುರಾಂತ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹಗೊಂಡಿದೆ   

ಬಸವಕಲ್ಯಾಣ: ಮಳೆಗಾಲ ಆರಂಭವಾಗಿ ತಿಂಗಳಾದರೂ ನಾಲೆಗಳಲ್ಲಿ ನೀರು ಹರಿದಿಲ್ಲ. ಕೆರೆಗಳು ತುಂಬಿಲ್ಲ. ಹೀಗಾಗಿ ಅಂತರ್ಜಲದ ಮಟ್ಟ ಹೆಚ್ಚದ ಕಾರಣ ತೆರೆದಬಾವಿ ಹಾಗೂ ಕೊಳವೆಬಾವಿಗಳಲ್ಲಿ ನೀರು ಕುಸಿದಿದೆ.

ಉತ್ತಮ ಮಳೆ ಆಗಿರುವುದರಿಂದ ಎಲ್ಲ ಭಾಗದಲ್ಲೂ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಬೀಜಗಳು ಮೊಳಕೆಯೊಡೆದಿದ್ದರಿಂದ ಹೊಲಗಳಲ್ಲಿ ಹಸಿರು ಕಾಣುವಂತಾಗಿದೆ. ಆದರೆ, ನಾಲೆ, ಬಾವಿಗಳಿಗೆ ನೀರು ಬಾರದೆ ತೊಂದರೆಯಾಗಿದೆ.

ತಾಲ್ಲೂಕಿನ ಚುಳಕಿನಾಲಾ ಹಾಗೂ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ದೊಡ್ಡ ಕೆರೆಗಳಾದ ತ್ರಿಪುರಾಂತ ಕೆರೆ, ನಾರಾಯಣಪುರ ಕೆರೆ, ಪ್ರತಾಪುರ ಕೆರೆ, ಶಿವಪುರ ಕೆರೆ, ಬೆಟಬಾಲ್ಕುಂದಾ ಕೆರೆ, ಆಲಗೂಡ ಕೆರೆ, ಅಟ್ಟೂರ್ ಕೆರೆ, ಉಜಳಂಬ ಕೆರೆಗಳಲ್ಲಿ ತಗ್ಗುಗಳಿರುವ ಸ್ಥಳಗಳಲ್ಲಿ ಬರೀ ಒಂದು ಅಡಿಯಷ್ಟು ಮಾತ್ರ ನೀರು ಸಂಗ್ರಹಗೊಂಡಿದೆ.

ADVERTISEMENT

`ಕೆಲ ವರ್ಷಗಳಿಂದ ಮಳೆಗಾಲದ ಆರಂಭದಲ್ಲಿ ಬಿತ್ತನೆಗೆ ಅನುಕೂಲ ಆಗುವಷ್ಟು ಮಳೆ ಬರುತ್ತಿದ್ದರೂ ಜಲಮೂಲಗಳು ಭರ್ತಿ ಆಗುವಷ್ಟು ವರ್ಷಾಧಾರೆ ಸುರಿಯುತ್ತಿಲ್ಲ. ಆದ್ದರಿಂದ ಕೆಲ ಪ್ರಮುಖ ನಾಲೆಗಳು ಕೂಡ ಒಣಗಿದ ಸ್ಥಿತಿಯಲ್ಲಿಯೇ ಇವೆ. ಕೆಲ ಕೆರೆಗಳಲ್ಲಿ ಅರ್ಧದಷ್ಟು ನೀರು ಕೂಡ ಸಂಗ್ರಹಗೊಳ್ಳುತ್ತಿಲ್ಲ. ಹೀಗಾಗಿ ಬಾವಿಗಳಿಗೆ ನೀರು ಬಾರದೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ' ಎಂದು ರೈತ ವೀರಭದ್ರಪ್ಪ ತ್ರಿಪುರಾಂತ ಹೇಳಿದ್ದಾರೆ.

`ಕೆಲ ಕೆರೆಗಳಿಗೆ ನೀರು ಹರಿದು ಬರುವ ದಾರಿಯಲ್ಲಿ ಅಡ್ಡವಾಗಿ ಕಲ್ಲು, ಮಣ್ಣು ಸಂಗ್ರಹಗೊಂಡಿದ್ದರಿಂದಲೂ ಸಮಸ್ಯೆಯಾಗಿದೆ. ನೀರು ಕೆರೆಗೆ ಬಾರದೆ ನಾಲೆಯಿಂದ ಹರಿದು ಹೋಗುವಂತಾಗಿದ್ದು ಇಂಥಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು’ ಎಂದು ಶಂಕರ ಮಂಠಾಳ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.