ADVERTISEMENT

ಇಳೆಗೆ ತಂಪೆರೆದ ಮಳೆ: ರೈತರ ಹರ್ಷ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 4:57 IST
Last Updated 29 ಜೂನ್ 2022, 4:57 IST
ಬೀದರ್‍ನ ವಿದ್ಯಾನಗರ ಕಾಲೊನಿಯಲ್ಲಿ ಮಹಿಳೆಯೊಬ್ಬರು ಜಿಟಿ ಜಿಟಿ ಮಳೆಯಲ್ಲೇ ಮಕ್ಕಳೊಂದಿಗೆ ನಡೆದುಕೊಂಡು ಹೋದರು
ಬೀದರ್‍ನ ವಿದ್ಯಾನಗರ ಕಾಲೊನಿಯಲ್ಲಿ ಮಹಿಳೆಯೊಬ್ಬರು ಜಿಟಿ ಜಿಟಿ ಮಳೆಯಲ್ಲೇ ಮಕ್ಕಳೊಂದಿಗೆ ನಡೆದುಕೊಂಡು ಹೋದರು   

ಬೀದರ್: ನಗರದಲ್ಲಿ ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೆ ಸುರಿದ ಸಾಧಾರಣದಿಂದ ಕೂಡಿದ ಜಿಟಿ ಜಿಟಿ ಮಳೆಯು ಜನ ಜೀವನ ಅಸ್ತವ್ಯಸ್ತಗೊಳಿಸಿತು.

ಬೆಳಿಗ್ಗೆ ಆಗಸ ಶುಭ್ರವಾಗಿದ್ದರೂ, ಮಧ್ಯಾಹ್ನದ ವೇಳೆಗೆ ದಟ್ಟ ಮೊಡಗಳು ಆವರಿಸಿಕೊಂಡವು. ಮಧ್ಯಾಹ್ನ ಆರಂಭದಲ್ಲಿ ಕೆಲ ಕಾಲ ಮಳೆ ಹನಿಗಳು ಉದುರಿ ಮರೆಯಾದವು. ನಂತರ ಸಾಧಾರಣ ಮಳೆ ಸುರಿಯಿತು. ಅನಂತರ ಜಿಟಿ ಜಿಟಿಯಾಗಿ ಮುಂದುವರಿಯಿತು.

ಶಾಲಾ, ಕಾಲೇಜು ವಿದ್ಯಾರ್ಥಿಗಳು, ನೌಕರರು ಮಳೆಯಲ್ಲಿ ನೆನೆದುಕೊಂಡೇ ಮನೆ ಸೇರಿದರು. ಅನೇಕರು ಕೊಡೆಗಳನ್ನು ಹಿಡಿದುಕೊಂಡು ಓಡಾಡಿದರು. ಬೀದರ್ ತಾಲ್ಲೂಕಿನ ಚಿಕ್ಕಪೇಟೆ, ಮರಕಲ್, ಜನವಾಡ, ಔರಾದ್ ತಾಲ್ಲೂಕಿನ ಕೌಠಾ, ಸಂತಪುರ, ಭಾಲ್ಕಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.

ADVERTISEMENT

ಸಂತಪುರ, ಚಿಂತಾಕಿ ಹೋಬಳಿಯಲ್ಲಿ ಸಾಧಾರಣ ಮಳೆ

ಔರಾದ್: ತಾಲ್ಲೂಕಿನ ಸಂತಪುರ ಹಾಗೂ ಚಿಂತಾಕಿ ಹೋಬಳಿಯಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ.
ಸಂತಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 1 ಗಂಟೆಗೂ ಹೆಚ್ಚು ಮಳೆ ಸುರಿದಿದೆ.

ಚಿಂತಾಕಿ, ವಡಗಾಂವ್, ಗುಡಪಳ್ಳಿ, ಮುಸ್ತಾಪುರ, ಕೌಠಾ, ಹೆಡಗಾಪುರ ಗ್ರಾಮಗಳಲ್ಲಿಯೂ ಮಳೆಯಾಗಿದೆ. ಈ ಬಾರಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಸೋಯಾ ಬಿತ್ತನೆಗೆ ಇದು ಸಕಾಲ. ಬಿತ್ತನೆ ಕಾಲಕ್ಕೆ ಬೀಜ ಹೆಚ್ಚು ಆಳ ಹೋಗದಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ ಸಲಹೆ ನೀಡಿದ್ದಾರೆ.

ತುಂತುರು ಮಳೆ

ಭಾಲ್ಕಿ: ವಿವಿಧೆಡೆ ಉತ್ತಮ ಮಳೆ ಪ್ರಜಾವಾಣಿ ವಾರ್ತೆ ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೆ ಉತ್ತಮ ಮಳೆಯಾಗಿದೆ.

ಧಾರಜವಾಡಿ, ಕದಲಾಬಾದ್, ತಳವಾಡ, ಕರಡ್ಯಾಳ, ಕೋನಮೇಳಕುಂದಾ, ಹಲಬರ್ಗಾ, ಭಾತಂಬ್ರಾ, ಕಲವಾಡಿ, ನಿಡೇಬನ, ಆನಂದವಾಡಿ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಮಳೆ ಆಗಿದೆ. ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ, ಮಳೆ ಬಾರದ ಹಿನ್ನೆಲೆಯಲ್ಲಿ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.