ADVERTISEMENT

ಕಾನೂನಿಗೆ ವಿರುದ್ಧವಾಗಿ ಹೋದಾಗ ಬಂಧಿಸದೇ ಮುತ್ತು ಕೊಡಬೇಕೆ!? ರಾಜಶೇಖರ ಪಾಟೀಲ

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲಗೆ ರಾಜಶೇಖರ ಪಾಟೀಲ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:05 IST
Last Updated 16 ನವೆಂಬರ್ 2025, 4:05 IST
ಮಾಜಿ ಸಚಿವ ರಾಜಶೇಖರ ಪಾಟೀಲ
ಮಾಜಿ ಸಚಿವ ರಾಜಶೇಖರ ಪಾಟೀಲ   

ಬೀದರ್: ‘ಕಾನೂನು ಚೌಕಟ್ಟಿನಲ್ಲಿ ಹೋರಾಟವನ್ನು ಮಾಡಬೇಕು. ಕಾನೂನಿಗೆ ವಿರುದ್ಧವಾಗಿ ಹೋದಾಗ ಪೊಲೀಸರು ಬಂಧಿಸದೇ ನಿಮಗೇನು ಮುತ್ತು ಕೊಡಬೇಕೆ?’ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಅವರು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರನ್ನು ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಈಚೆಗೆ ಹುಮನಾಬಾದ್‌ನಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ, ಹೋರಾಟದ ದಿಕ್ಕು ತಪ್ಪಿಸಿ ತಾವೇ ಹೋರಾಟ ಮಾಡಿದಂತೆ ತೋರಿಸಿಕೊಳ್ಳುವ ಕೆಲಸ ಬಿಜೆಪಿ ನಾಯಕರು ಮಾಡಿದ್ದಾರೆ. ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮುಂದಾಗಿದ್ದರು. ಪೋಲಿಸರು ಹಾಕಿದ ಬ್ಯಾರಿಕೇಡ್‌ಗಳನ್ನು ಹಾರಿ ಕೈಯಲ್ಲಿ ಮುಖ್ಯಮಂತ್ರಿಗಳು, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಪೌರಾಡಳಿತ ಸಚಿವರ ಭಾವಚಿತ್ರಗಳನ್ನು ಪ್ರದರ್ಶಿಸುವಾಗ ಪೋಲಿಸರು ತಡೆದಿದ್ದಕ್ಕೆ ಗಲಾಟೆ ಮಾಡಿದಾಗ ಬಂಧಿಸದೇ ಮತ್ತೇನು ಮಾಡಬೇಕು’ ಎಂದರು.

ADVERTISEMENT

‘ಪೋಲಿಸರು ನಮ್ಮನ್ನು ಸಹ ಬ್ಯಾರಿಕೇಡ್‌ನಲ್ಲೆ ತಡೆದಿದ್ದರು. ಆದರೆ ನಾವು ಕಾನೂನು ಮುರಿದು ಮುಂದೆ ಹೋಗಲಿಲ್ಲ, ಹೀಗಾಗಿ ನಮ್ಮನ್ನು ಬಂಧಿಸಿಲ್ಲ. ರೈತರು ಯಾರ ಸಹಾಯ ಅಥವಾ ಬೆಂಬಲ ಕೇಳಿಲ್ಲ, ಕೈಯಲ್ಲಿ ಯಾವುದೇ ಫಲಕಗಳನ್ನು ತಂದಿಲ್ಲ, ಕಾನೂನು ಕೈಗೆತ್ತಿಕೊಂಡಿಲ್ಲ’ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ವಿಧಾನ ಪರಿಷತ್ ಮಾಜಿ ಅರವಿಂದಕುಮಾರ ಅರಳಿ, ಮನ್ನಾನ ಸೇಠ್, ಜಿ.ಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ, ಅಫ್ಸರಮಿಯ್ಯಾ, ಉಮೇಶ ಜಂಬಗಿ, ಮಲ್ಲಿಕಾರ್ಜುನ ಮಾಶೆಟ್ಟಿ, ದತ್ತು ಮೂಲಗೆ, ಓಂಕಾರ ತುಂಬಾ ಇದ್ದರು.

ಬಿಜೆಪಿಯವರು ರೈತರ ಬಗ್ಗೆ ಮೊಸಳೆ ಕನಿಕರ ತೋರಿಸಿ ತಮ್ಮ ಬೇಳೆ ಬೆಯಿಸಿಕೊಳ್ಳಲು ಹೊರಟಿದ್ದು ನಾಚಿಕೆ ಪಡುವ ಸಂಗತಿ

‘ನಮ್ಮ ಮನೆ ಕಡೆ ಕೈ ಮಾಡಿ ಘೋಷಣೆ‘

‘ರೈತರ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ನಮ್ಮ ಮನೆ ಎದುರು ಉದ್ದೇಶ ಪೂರ್ವಕವಾಗಿ ಅರ್ಧ ಗಂಟೆಯವರೆಗೆ ಘೋಷಣೆ ಕೂಗಿದ್ದಾರೆ. ಶಾಲಾ ವಾಹನದಲ್ಲಿ ಬಂಧಿಸಿ ಕರೆದುಕೊಂಡು ಹೋಗುತ್ತಿರುವಾಗ ನಮ್ಮ ಮನೆ ಕಡೆ ಕೈ ಮಾಡಿ ಘೋಷಣೆ ಕೂಗಿದ್ದಾರೆ. ಆ ಸಂದರ್ಭದಲ್ಲಿ ನಮ್ಮ ಬೆಂಬಲಿಗರು ಕೂಡ ಕೈ ಮಾಡಿದ್ದಾರೆ. ಇದರ ಬಗ್ಗೆ ಎಸ್‌ಪಿ ಅವರಿಗೆ ವಿಡಿಯೊ ಕೊಟ್ಟಿದ್ದೇನೆ’ ಎಂದು ರಾಜಶೇಖರ ಪಾಟೀಲ ಹೇಳಿದರು. 

‘ನಿಮ್ಮ ದಮ್ಮು ತಾಕತ್ತು ಎಲ್ಲಿದೆ’

‘ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ಹಾದಿ ಬೀದಿಯಲ್ಲಿ ಮಾತು ಎತ್ತಿದರೆ ದಮ್ಮು ತಾಕತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ಈ ದಮ್ಮು ತಾಕತ್ತು ಹುಮನಾಬಾದ್ನಲ್ಲಿನ ವಿಷಪೂರಿತ ಕಾರ್ಖಾನೆಗಳನ್ನು ಬಂದ್ ಮಾಡಿಸುವಲ್ಲಿ ತೋರಿಸಿ’ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಸವಾಲು ಹಾಕಿದರು. ‘ಈ ಕಾರ್ಖಾನೆಗಳಿಂದ ಗಡವಂತಿ ಮೋಳಕೇರಾ ಬಸಂತಪೂರ್ ಗ್ರಾಮಗಳ ಜನ ಶುದ್ಧ ಗಾಳಿ ನೀರಿಗಾಗಿ ಪರದಾಟ ಮಾಡುವ ಪರಿಸ್ಥಿತಿ ಬಂದಿದೆ. ನಿತ್ಯವೂ ನಿಮಗೆ ಹಿಡಿ ಶಾಪ ಹಾಕುತ್ತಿದ್ದಾರೆ’ ಎಂದರು.‌

‘ಶಾಸಕ ಮತ್ತು ಸಹೋದರರ ಮೇಲೆ ಕ್ರಮ ಕೈಗೊಳ್ಳಿ’

ಈ ಹಿಂದೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹಾಗೂ ಅವರ ಸಹೋದರ ವಿರುದ್ಧ ಡಿವೈಎಸ್ಪಿ ಅವರು ಎಸ್ಪಿಗೆ ಒಂದು ಪತ್ರ ಬರೆದಿದ್ದರು. ಹೀಗಾಗಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ರಾಜಶೇಖರ ಪಾಟೀಲ ಒತ್ತಾಯಿಸಿದರು. 2023ರ ಚುನಾವಣೆಯಲ್ಲಿ ನಾನು ಶಾಸಕನಾದರೆ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಆರಂಭಿಸುತ್ತೇನೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಇವುಗಳ ಭೂಮಿಪೂಜೆಯನ್ನೂ ಮಾಡದೆ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದರು. ಹುಮನಾಬಾದ್‌ನಲ್ಲಿ 20 ವರ್ಷ ನಾನು ಸಹ ಅಧಿಕಾರ ಮಾಡಿದ್ದೇನೆ. ಒಬ್ಬ ಅಧಿಕಾರಿಯೂ ಬೇಸರ ವ್ಯಕ್ತಪಡಿಸಿದ ಉದಾಹರಣೆ ಇಲ್ಲ. ಆದರೆ ಈಗ ಇವರ ಅಧಿಕಾರದಲ್ಲಿ ಹುಮನಾಬಾದ್‌ಗೆ ಅಧಿಕಾರಿಗಳು ಬರಲು ಹಿಂಜರಿಯುತಿದ್ದಾರೆ. ಇಷ್ಟಾದರೂ ಪೊಲೀಸ್ ಕಚೇರಿಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.