ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಶುಕ್ರವಾರ ಹೋಳಾ ಹಬ್ಬದ ಅಂಗವಾಗಿ ನಡೆಯುವ ಎತ್ತುಗಳ ಚಕ್ಕಡಿ ಓಟದ ದೃಶ್ಯ (ಸಂಗ್ರಹ ಚಿತ್ರ)
ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ರಾಜೇಶ್ವರದಲ್ಲಿ ಮುಸ್ಲಿಂ ಸಮುದಾಯದವರೂ ಪಾಲ್ಗೊಳ್ಳುವಂಥ ಸಾಮಾಜಿಕ ಸಾಮರಸ್ಯ ಸಾರುವ ಹೋಳಾ ಹಬ್ಬದ ಎತ್ತುಗಳ ಚಕ್ಕಡಿ ಓಟದ ಸ್ಪರ್ಧೆ ಶುಕ್ರವಾರ (ಆ.22) ನಡೆಯಲಿದೆ. ಗ್ರಾಮದ ಮಧ್ಯದಲ್ಲಿನ ರಸ್ತೆಯಲ್ಲಿ ಸಂಜೆ ಹೊತ್ತು ಚಿಕ್ಕ ಗಾಲಿಗಳಿಗೆ ಕಟ್ಟಿದ ನೊಗವನ್ನು ಎಳೆದುಕೊಂಡು ಜೋಡಿ ಎತ್ತುಗಳು ಓಡುತ್ತಿದ್ದರೆ ಮೈ ಜುಮ್ಮೆನ್ನುತ್ತದೆ. ಈ ದೃಶ್ಯ ಕಣ್ತುಂಬಿಕೊಳ್ಳಲು ರಸ್ತೆ ಪಕ್ಕದಲ್ಲಿ ಜನರು ಕಿಕ್ಕಿರಿದು ಸೇರುತ್ತಾರೆ.
ಹೈದರಾಬಾದ್ ನಿಜಾಮ್ ಅರಸರ ಆಡಳಿತದಲ್ಲಿ ರಾಜೇಶ್ವರ ಜಿಲ್ಲಾ ಕೇಂದ್ರವಿತ್ತು. ಅಂದಿನ ವಿವಿಧ ಕಚೇರಿಗಳಿದ್ದ ಕೋಟೆಯ ಗೋಡೆಯಂತಿರುವ ಆವರಣ ಗೋಡೆ ಹೊಂದಿರುವ ಸ್ಥಳ ಇಲ್ಲಿದೆ. ಇದರ ಸುತ್ತಲಿನಲ್ಲಿ ಆಳವಾದ ಕಂದಕವಿದ್ದು ನಾಲ್ಕು ಕಡೆಗಳಲ್ಲಿಯೂ ದೊಡ್ಡ ಹುಡೆಗಳಿದ್ದವು. ಅವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದು ಗತವೈಭವವನ್ನು ನೆನಪಿಸುತ್ತವೆ.
ಅಂದಿನಿಂದಲೂ ಹೋಳಾ ಹಬ್ಬಕ್ಕೆ ಚಕ್ಕಡಿ ಓಟದ ಸ್ಪರ್ಧೆ ಏರ್ಪಡಿಸಲಾಗುತ್ತದೆ.
ಹೋಳಾ ಅಂಗವಾಗಿ ಅನ್ಯ ಗ್ರಾಮಗಳಲ್ಲಿ ಬರೀ ಎತ್ತುಗಳ ಮೆರವಣಿಗೆ ನಡೆದರೆ ರಾಜೇಶ್ವರದಲ್ಲಿ ಮಾತ್ರ ಚಕ್ಕಡಿ ಓಟ ನಡೆಯುವುದರಿಂದ ನೋಡಲು ಸುತ್ತಲಿನ ಹಳ್ಳಿಗಳವರು ಬರುತ್ತಾರೆ.
ಮನೆಯಲ್ಲಿನ ಪೂಜೆಯ ನಂತರ ಸಂಜೆ ಮೆರವಣಿಗೆಯ ಮೂಲಕ ಓಟದ ಸ್ಥಳಕ್ಕೆ ಬರಲಾಗುತ್ತದೆ. ಗ್ರಾಮದ ಪೂರ್ವಕ್ಕಿರುವ ಹಳೆಯ ಪಂಚಾಯಿತಿ ಎದುರಿನ ರಸ್ತೆಯಲ್ಲಿ ಒಂದೊಂದರಂತೆ ತಳಿರು, ತೋರಣಗಳಿಂದ ಸಿಂಗರಿಸಿದ ಚಕ್ಕಡಿಗಳನ್ನು ಓಡಿಸಲಾಗುತ್ತದೆ. ಅದಾದಮೇಲೆ ಹನುಮಾನ ದೇವಸ್ಥಾನದ ಆವರಣದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.
‘ಸ್ಪರ್ಧೆಯ ಪೂರ್ವಸಿದ್ಧತೆಗಾಗಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ನಂದಾಬಾಯಿ ಪ್ರಭು ಹಾಗೂ ಉಪಾಧ್ಯಕ್ಷೆ ಅನಿತಾ ಮಲ್ಲಿಕಾರ್ಜುನ ಮಾಲೆ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಎಲ್ಲ 34 ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು. ಗ್ರಾಮೀಣ ಠಾಣೆ ಸಬ್ ಇನ್ ಸ್ಪೇಕ್ಟರ್ ನಾಗೇಂದ್ರ ಅವರು ಸುವ್ಯವಸ್ಥೆ ಕೈಗೊಳ್ಳುವ ಬಗ್ಗೆ ಮಾರ್ಗದರ್ಶನ ಮಾಡಿದರು’ ಎಂದು ಪಿಡಿಒ ಪದ್ಮಪ್ಪ ಗಾಣಿಗೇರ ತಿಳಿಸಿದ್ದಾರೆ.
ಜಿಲ್ಲೆಯ 2ನೇ ದೊಡ್ಡ ಪಂಚಾಯಿತಿ ಕೇಂದ್ರ | ಅರಸರ ಕಾಲದಿಂದಲೂ ಸ್ಪರ್ಧೆ ಆಯೋಜನೆ | 10 ಸಾವಿರ ಜನರು ಉಪಸ್ಥಿತರಿರುವ ಸಾಧ್ಯತೆ
ಗ್ರಾಮ ಪಂಚಾಯಿತಿಯಿಂದ ಸ್ಪರ್ಧೆ ನಡೆಯುವ ರಸ್ತೆಯ ದುರಸ್ತಿ ಮತ್ತು ಚರಂಡಿ ಸ್ವಚ್ಛತೆ ಕೈಗೊಳ್ಳಲಾಗಿದ್ದು ಜನ ದಟ್ಟಣೆ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆಪದ್ಮಪ್ಪ ಗಾಣಿಗೇರ ಪಿಡಿಒ
ಬಹುಮಾನ ವಿತರಣೆ
ಓಟದಲ್ಲಿ 50ಕ್ಕೂ ಅಧಿಕ ಚಕ್ಕಡಿಗಳು ಪಾಲ್ಗೊಳ್ಳಲಿವೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ರಮವಾಗಿ ₹ 40 ಸಾವಿರ ₹30 ಸಾವಿರ ಮತ್ತು ₹ 20 ಸಾವಿರ ನಗದು ನೀಡಲಾಗುತ್ತದೆ. ಇದಲ್ಲದೆ ಕೆಲ ಜೋಡಿಗಳಿಗೆ ಸಮಾಧಾನಕರ ಬಹುಮಾನ ಉತ್ತಮ ಜೋಡೆತ್ತುಗಳ ಬಹುಮಾನವನ್ನು ಸಹ ವಿತರಿಸಲಾಗುತ್ತದೆ. ಪೊಲೀಸ್ ಬಂದೋಬಸ್ತ್ ಏರ್ಪಡಿಸುವುದಕ್ಕೆ ಈಗಾಗಲೇ ಸಭೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.