ADVERTISEMENT

ರಕ್ಷಾ ಬಂಧನ; ರಾಖಿ ಮಾರಾಟ ಜೋರು

ಮಹನಿಯರ ಭಾವಚಿತ್ರದ ರಾಖಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:22 IST
Last Updated 11 ಆಗಸ್ಟ್ 2022, 4:22 IST
ಖಟಕಚಿಂಚೋಳಿ ಸಮೀಪದ ಹಳ್ಳಿಖೇಡ.ಬಿ ಪಟ್ಟಣದ ಅಂಗಡಿಯೊಂದರಲ್ಲಿ ರಾಖಿ ಖರೀದಿಯಲ್ಲಿ ತೊಡಗಿದ ಮಹಿಳೆ
ಖಟಕಚಿಂಚೋಳಿ ಸಮೀಪದ ಹಳ್ಳಿಖೇಡ.ಬಿ ಪಟ್ಟಣದ ಅಂಗಡಿಯೊಂದರಲ್ಲಿ ರಾಖಿ ಖರೀದಿಯಲ್ಲಿ ತೊಡಗಿದ ಮಹಿಳೆ   

ಖಟಕಚಿಂಚೋಳಿ: ರಕ್ಷಾ ಬಂಧನದ ಮುನ್ನಾದಿನವಾದ ಬುಧವಾರ ಮಾರುಕಟ್ಟೆಯಲ್ಲಿ ರಾಖಿಗಳ ಖರೀದಿ ಭರಾಟೆ ಜೋರಾಗಿತ್ತು. ಆಗಸ್ಟ್ 11ರಂದು ರಕ್ಷಾ ಬಂಧನವಿದೆ.

ಆದರೆ ಭಾನುವಾರದಿಂದಲೇ ಹೋಬಳಿಯ ಚಳಕಾಪುರ, ಡಾವರಗಾಂವ್ ಸೇರಿ ಇನ್ನಿತರ ಗ್ರಾಮಗಳ ಅಂಗಡಿಗಳಲ್ಲಿ ರಾಖಿ ಮಾರಾಟ ಮಾಡಲಾಗುತ್ತಿದೆ.

ರಕ್ಷಾ ಬಂಧನ ಅಕ್ಕ-ತಂಗಿ, ಅಣ್ಣ- ತಮ್ಮಂದಿರ ಪವಿತ್ರ ಹಬ್ಬವಾಗಿದೆ. ಹಬ್ಬದ ದಿನ ಅಣ್ಣ- ತಮ್ಮ ಎಲ್ಲೆ ಇದ್ದರೂ ಅಕ್ಕ- ತಂಗಿಯರ ಬಳಿಗೆ ಹೋಗಿ ರಾಖಿ ಕಟ್ಟಿಕೊಳ್ಳುವ ಮತ್ತು ಅಕ್ಕ-ತಂಗಿಯರು ಅಣ್ಣ-ತಮ್ಮಂದಿರ ಬಳಿಗೆ ತೆರಳಿ ರಾಖಿ ಕಟ್ಟುವುದು ಸಂಪ್ರದಾಯ.ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಸಹೋದರರಿಗೆ ಹಾಗೂ ಸಂಬಂಧಿಗಳಿಗೆ ಗ್ರಾಮೀಣ ಭಾಗದ ಸಹೋದರಿಯರು ಅಂಚೆ ಮೂಲಕ ರಾಖಿ ಕಳಿಸಿರುವುದು ಕಂಡುಬಂತು. ಇಂದಿನ ಯುಗಕ್ಕೆ ತಕ್ಕಂತೆ ರಾಖಿ ಸಿದ್ಧಪಡಿಸಲಾಗುತ್ತಿದೆ. ರಾಖಿಗಳಲ್ಲಿ ಬಸವಣ್ಣ, ಶಿವಕುಮಾರ ಸ್ವಾಮೀಜಿ, ಬಸವಲಿಂಗ ಅವಧೂತರು ಸೇರಿ ಇನ್ನಿತರ ಮಹನೀಯರ ಭಾವಚಿತ್ರಸೇರಿಸಿ ಸಿದ್ಧಪಡಿಸಿರುವುದರಿಂದ ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಜನರು ತಮ್ಮ ಇಷ್ಟಕ್ಕೆ ಅನುಗುಣವಾಗಿ ಖರೀದಿಸಲು ಮುಗಿ ಬೀಳುತ್ತಿದ್ದಾರೆ.ಸದ್ಯ ಮಾರುಕಟ್ಟೆಯಲ್ಲಿ ನೂಲಿನಿಂದ ಹಿಡಿದು ಹಲವಾರು ಬಗೆಯ ರಾಖಿಗಳಿವೆ. ₹20ರಿಂದ ₹ 200 ರವರೆಗೆ ಬಗೆ ಬಗೆಯ ರಾಖಿಗಳೂ ಮಾರಾಟ ಆಗುತ್ತಿವೆ. ನೂಲು, ರುದ್ರಾಕ್ಷಿ, ಮುತ್ತು, ಹೂವು ಮತ್ತಿತರ ಆಕಾರದ ರಾಖಿಗಳು ಗಮನ ಸೆಳೆಯುತ್ತಿವೆ. ಮಕ್ಕಳು ಹಾಗೂ ಹಿರಿಯರಿಗಾಗಿ ವಿಭಿನ್ನ ರೀತಿಯ ರಾಖಿಗಳು ಮಾರಾಟಕ್ಕಿವೆ ಎಂದು ವ್ಯಾಪಾರಿ ಗಣೇಶ ಘನಾತೆ
ತಿಳಿಸುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.