ADVERTISEMENT

ರಂಭಾಪುರಿ ಪೀಠದಿಂದ ಹಿಂದೂ ಧರ್ಮಕ್ಕೆ ದೊಡ್ಡ ಕೊಡುಗೆ: ಪ್ರಲ್ಹಾದ ಜೋಶಿ

ಕೇಂದ್ರ ಗ್ರಾಹಕ ವ್ಯವಹಾರ ಆಹಾರ, ನಾಗರಿಕ ವಿತರಣಾ ಖಾತೆ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:01 IST
Last Updated 27 ಸೆಪ್ಟೆಂಬರ್ 2025, 5:01 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮವನ್ನು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮವನ್ನು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು    

ಬಸವಕಲ್ಯಾಣ: ‘ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬಾಳೆಹೊನ್ನೂರು ರಂಭಾಪುರಿ ಪೀಠವು ಹಿಂದೂ ಧರ್ಮ ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ವಿತರಣಾ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಕೆಲವರಿಂದ ಭಾಷೆ, ಜಾತಿ, ಪ್ರಾದೇಶಿಕತೆಯ ಆಧಾರದಲ್ಲಿ ಧರ್ಮ ಒಡೆಯುವ ಷಡ್ಯಂತ್ರ ನಡೆಯುತ್ತಿದೆ. ದೇಶ ಮೇಲಕ್ಕೆ ಹೋಗುತ್ತಿದೆ. ಹಿಂದೆ ದುರ್ಬಲ ಆರ್ಥಿಕ ವ್ಯವಸ್ಥೆಯಿತ್ತು. ಆದರೆ, ಈಗ ನಮ್ಮೆಲ್ಲರ ಪ್ರಯತ್ನದಿಂದ ವಿಶ್ವದ ನಾಲ್ಕನೇಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ದೇಶ ಹೊರಹೊಮ್ಮಿದೆ. ಇದು ಕೆಲವರಿಗೆ ಹಿಡಿಸುತ್ತಿಲ್ಲ’ ಎಂದು ಹೇಳಿದರು.

‘ಹಿಂದೂ ಧರ್ಮದ ಕೌಟುಂಬಿಕ ಮತ್ತು ಆಹಾರ ಪದ್ಧತಿ ಶ್ರೇಷ್ಠವಾದದ್ದು. ಆಧ್ಯಾತ್ಮಿಕ ಬಲ ಹೊಂದಿರುವಂಥದ್ದು. ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಸಹ ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಧ್ಯೇಯೋದ್ದೇಶದಿಂದ ಶ್ರಮಿಸುತ್ತಿದ್ದಾರೆ. ಬಸವಣ್ಣನವರು ದಯವೇ ಧರ್ಮದ ಮೂಲವೆಂದರು. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಪಂಚಪೀಠಗಳ ಘೋಷವಾಕ್ಯವಾಗಿದೆ. ಅದರಲ್ಲಿ ‘ಸರ್ವೇಜನಾಃ ಸುಖಿನೋಭವಂತು’ ಎಂಬ ಭಾರತೀಯ ಭವ್ಯ ಪರಂಪರೆ ಪ್ರತಿಬಿಂಬಿತವಾಗಿದೆ. ಶಿವ ಮತ್ತು ಐಕ್ಯಕ್ಕೆ ಮಹತ್ವ ನೀಡುವ ರೇಣುಕಾಚಾರ್ಯರ ಸಂದೇಶ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಇದ್ದು ಅದನ್ನು ಎಲ್ಲರೂ ಅನುಸರಿಸಬೇಕು’ ಎಂದು ಹೇಳಿದರು.

ADVERTISEMENT

ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಶಾಸಕ ಶರಣು ಸಲಗರ, ಪ್ರಭು ಚವಾಣ್, ಬಿಚಕುಂದ ಸೋಮಲಿಂಗ ಶಿವಾಚಾರ್ಯರು, ಶಿವಪ್ರಕಾಶ ಶಿವಾಚಾರ್ಯರು, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಪ್ರೊ.ರುದ್ರೇಶ್ವರಸ್ವಾಮಿ ಗೋರಟಾ, ರಮೇಶ ಶಿವಪುರ ಮಾತನಾಡಿದರು.

ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ, ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಪ್ರಕಾಶ ಖಂಡ್ರೆ, ಪ್ರದೀಪ ವಾತಡೆ ಉಪಸ್ಥಿತರಿದ್ದರು.

ಪಂಚಾಕ್ಷರಿ ಹಿರೇಮಠ, ಶಿವಯ್ಯ ಸ್ವಾಮಿ ಕಮಠಾಣ, ಗಂಗಾಧರ ಮಠಪತಿ ಅವರಿಗೆ ವಿಶೇಷ ಗುರುರಕ್ಷೆ ನೀಡಲಾಯಿತು. ಗುರುಲಿಂಗಯ್ಯ ಹಿತ್ತಲಶೀರೂರ ಸಂಗೀತ ಪ್ರಸ್ತುತಪಡಿಸಿದರು. ಶ್ರದ್ಧಾ ಪಾಟೀಲ ಯೋಗ ನೃತ್ಯ
ಪ್ರದರ್ಶಿಸಿದರು.

ಪ್ರಾದೇಶಿಕತೆ, ಭಾಷೆ, ಜಾತಿ ಹೆಸರಲ್ಲಿ ಧರ್ಮ ಒಡೆಯುವ ಷಡ್ಯಂತ್ರ ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿ ಶಕ್ತಿಯಾಗಿರುವುದು ಕೆಲವರಿಗೆ ಹಿಡಿಸುತ್ತಿಲ್ಲ

‘ರಂಭಾಪುರಿ’ ಅಗ್ರಶಕ್ತಿ ಪೀಠ

ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ ‘ರಂಭಾಪುರಿ ಪೀಠವು ಪಂಚ ಪೀಠಗಳಲ್ಲಿ ಅಗ್ರ ಶಕ್ತಿ ಪೀಠವಾಗಿದೆ. ಈ ಪೀಠದಿಂದ ದಸರಾ ಧರ್ಮ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಆದರೆ ಅನೇಕರು ಇಂಥ ವೈಭವದ ಉತ್ಸವ ಏಕೆ? ಎಂದು ಪ್ರಶ್ನಿಸುವವರಿದ್ದಾರೆ. ಆಚಾರ್ಯ ಪರಂಪರೆ ಮತ್ತು ಶರಣ ಸಂಸ್ಕೃತಿ ಬೇರೆ ಬೇರೆ ಆಗಿರಬಾರದು. ಪಂಚಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸು ಬಯಸುವವರಾಗಿದ್ದಾರೆ. ಎರಡೂ ತತ್ವಗಳು ಒಂದೇ ಆಗಿವೆ. ಹೀಗಾಗಿ ಶಿವಾಚಾರ್ಯರು ರೂಢಿಯಲ್ಲಿ ಕೆಲ ಬದಲಾವಣೆ ತಂದು ಹೊಸತನ ತೋರಬೇಕು. ಸಮಾಜದಲ್ಲಿ ಒಗ್ಗಟ್ಟು ಮೂಡಿಸಬೇಕು. ಜಗತ್ತಿಗೆ ಬೆಳಕು ಕೊಡುವ ಶಕ್ತಿ ವೀರಶೈವ ಲಿಂಗಾಯತ ಧರ್ಮಕ್ಕೆ ಮಾತ್ರ ಇರುವುದರಿಂದ ಇಂಥ ಐಕ್ಯತೆ ಅಗತ್ಯವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.