ಬೀದರ್: ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣದ ಹಿನ್ನೆಲೆಯಲ್ಲಿ ಮೊಬೈಲ್ ಕರೆಗಳ ಜಾಡು ಹಿಡಿದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಭಾಲ್ಕಿಯ ಯುವಕ ಅಭಿಷೇಕ ಜಿಂದೆ ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಭಿಷೇಕ್‌ಗೆ ಸೇರಿದ ಲ್ಯಾಪ್‌ಟಾಪ್ ಹಾಗೂ ಸಿ.ಡಿ.ಗಳನ್ನೂ ವಶಪಡಿಸಿಕೊಂಡಿದ್ದಾರೆ. ಸಿ.ಡಿ ಪ್ರಕರಣ ಸದ್ದು ಮಾಡುತ್ತಿದ್ದಂತೆಯೇ ಬೆಂಗಳೂರಿನ ಯುವಕ ಭಾಲ್ಕಿಗೆ ಬಂದು ವಾಸವಾಗಿದ್ದ. ಅಭಿಷೇಕ್ ಹಾಗೂ ಬೆಂಗಳೂರಿನ ಯುವಕನನ್ನು ತನಿಖಾ ತಂಡದ ಅಧಿಕಾರಿಗಳು ಕರೆದೊಯ್ದಿದ್ದಾರೆ.
ದಿನೇಶ್ ಕಲ್ಲಹಳ್ಳಿ ದೂರು ದಾಖಲಿಸಿದ ದಿನವೇ ಪೊಲೀಸರು ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದರು. ಇದರಲ್ಲಿ ಕೆಲ ವ್ಯಕ್ತಿಗಳು ಬೆಂಗಳೂರಿನಿಂದ ಭಾಲ್ಕಿಯ ಅಭಿಷೇಕ್‌ಗೆ ಕರೆ ಮಾಡಿರುವ ಕುರುಹುಗಳು ದೊರಕಿವೆ ಎನ್ನಲಾಗಿದೆ.
ಅಭಿಷೇಕ್ ಮಾರ್ಚ್ 11ರಂದು ಮಧ್ಯಾಹ್ನ 2.30ಕ್ಕೆ ಮನೆಯಿಂದ ಹೊರ ಹೋಗಿದ್ದು, ಶುಕ್ರವಾರ ಮಧ್ಯಾಹ್ನದವರೆಗೂ ಮನೆಗೆ ಮರಳಿರಲಿಲ್ಲ. ಅವರ ಮನೆಯವರು ತಮ್ಮ ಸಂಬಂಧಿ ಹಾಗೂ ಗೆಳೆಯರ ಮನೆಗಳಲ್ಲಿ ಹುಡುಕಾಡಿದ್ದರು. ನಂತರ ವಾಲಿಗಲ್ಲಿಯಲ್ಲಿರುವ ಅಂಗಡಿಗಳ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದ್ದರು. ಅದರಲ್ಲಿ ಅಪರಿಚಿತ ವ್ಯಕ್ತಿಗಳು ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು.
‘ಅಪರಿಚಿತರು ನನ್ನ ಅಣ್ಣನ ಮಗ ಅಭಿಷೇಕ್ ಜಿಂದೆ ಅವರನ್ನು ಅಪಹರಿಸಿದ್ದಾರೆ. ಅವರನ್ನು ಹುಡುಕಿ ಕೊಡಬೇಕು’ ಎಂದು ಅಭಿಷೇಕ್ ಚಿಕ್ಕಪ್ಪ ವಕೀಲ ಅರವಿಂದ ಜಿಂದೆ ದೂರು ನೀಡಿದ್ದಾರೆ. ನಂತರ ಎಸ್‌ಐಟಿ ಅಧಿಕಾರಿಗಳು ಕರೆದೊಯ್ದಿದ್ದು ಖಚಿತವಾಗಿದೆ.
‘ಎಸ್‌ಐಟಿ ಅಧಿಕಾರಿಗಳು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾಲ್ಕಿಯ ಯುವಕನೊಬ್ಬನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಯಾವ ಪ್ರಕರಣ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.