ADVERTISEMENT

ಪಡಿತರ ವಿತರಣೆ ಸಮಸ್ಯೆ ಸರಿಪಡಿಸಿ: ಶಾಸಕ ಪ್ರಭು ಚವ್ಹಾಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:27 IST
Last Updated 17 ಜನವರಿ 2026, 6:27 IST
ಕಮಲನಗರ ತಾಲ್ಲೂಕಿನ ತೋರಣಾ ಗ್ರಾಮದಲ್ಲಿ ಶುಕ್ರವಾರ ಶಾಸಕ ಪ್ರಭು ಚವ್ಹಾಣ ಅವರು ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದರು 
ಕಮಲನಗರ ತಾಲ್ಲೂಕಿನ ತೋರಣಾ ಗ್ರಾಮದಲ್ಲಿ ಶುಕ್ರವಾರ ಶಾಸಕ ಪ್ರಭು ಚವ್ಹಾಣ ಅವರು ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದರು    

ಕಮಲನಗರ: ‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪಡಿತರ ವಿತರಣೆಯಲ್ಲಿ ತೊಂದರೆಗಳು ಎದುರಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ತಕ್ಷಣ ಸಮಸ್ಯೆಗಳನ್ನು ಸರಿಪಡಿಸಬೇಕು’ ಎಂದು ಶಾಸಕ ಪ್ರಭು ಬಿ.ಚವಾಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಮಲನಗರ ತಾಲ್ಲೂಕಿನ ಠಾಣಾ ಕುಶನೂರ ಹೋಬಳಿ ವ್ಯಾಪ್ತಿಯಲ್ಲಿನ ಲಿಂಗದಳ್ಳಿ(ಯು), ಮುಧೋಳ(ಬಿ), ತೋರ್ಣಾ ವಾಡಿ, ತೋರ್ಣಾ, ಹೊಳಸಮುದ್ರ, ಸಾವಳಿ, ಬಸನಾಳ, ಕೋರಿಯಾಳ, ಮುಧೋಳ(ಕೆ)ನಲ್ಲಿ ಗ್ರಾಮ ಸಂಚಾರ ನಡೆಸಿ ಅವರು ಮಾತನಾಡಿದರು.

‘ಕೆಲವು ಪಡಿತರ ಅಂಗಡಿಗಳಲ್ಲಿ ಸರಿಯಾದ ಸಮಯಕ್ಕೆ ಅಕ್ಕಿ, ಗೋಧಿ ಸೇರಿದಂತೆ ಅಗತ್ಯ ವಸ್ತುಗಳು ವಿತರಣೆ ಆಗುತ್ತಿಲ್ಲ, ಫಲಾನುಭವಿಗಳ ಹೆಸರುಗಳು ಪಟ್ಟಿಯಿಂದ ಕೈ ತಪ್ಪಿರುವುದು, ತಾಂತ್ರಿಕ ಸಮಸ್ಯೆಗಳ ಹೆಸರಿನಲ್ಲಿ ಸಾರ್ವಜನಿಕರನ್ನು ಅಲಕ್ಷ್ಯ ಮಾಡುವಂತಹ ಪ್ರಕರಣಗಳು ಕೇಳಿ ಬರುತ್ತಿವೆ. ಇಂತಹ ಸಮಸ್ಯೆಗಳಿಗೆ ನಿರ್ಲಕ್ಷ್ಯ ವಹಿಸಬಾರದು’ ಎಂದು ಹೇಳಿದರು.

ADVERTISEMENT

‘ಲಿಂಗದಳ್ಳಿ(ಯು) ಗ್ರಾಮಸ್ಥರು ಪ್ರತಿ ತಿಂಗಳು ಪಡಿತರಕ್ಕಾಗಿ ಎಲ್ಲ ಕೆಲಸ ಬಿಟ್ಟು ಪಕ್ಕದ ಊರಿಗೆ ಹೋಗಬೇಕು. ಇದರಿಂದ ವಯಸ್ಸಾದವರು, ಆರೋಗ್ಯ ಸಮಸ್ಯೆ ಇರುವವರು ಒಳಗೊಂಡು ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ದಯವಿಟ್ಟು ನಮ್ಮ ಗ್ರಾಮದಲ್ಲೇ ಪಡಿತರ ವಿತರಿಸಲು ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಗ್ರಾಮಸ್ಥರ ಹಿತದೃಷ್ಟಿಯಿಂದ ಮುಂದಿನ ತಿಂಗಳಿನಿಂದ ಗ್ರಾಮದಲ್ಲಿಯೇ ಪಡಿತರ ಸಿಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

‘ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆ ಯಾವುದೇ ಅಡೆತಡೆ ಇಲ್ಲದೆ ನಡೆಯಬೇಕು. ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಿ, ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಪಡಿತರ ವಿತರಣೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕರು ಹೇಳಿದರು.

‘ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಪರಿಹಾರ ಕಲ್ಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಲಾಭ ನೇರವಾಗಿ ಬಡ ಮತ್ತು ಶ್ರಮಿಕ ವರ್ಗದವರಿಗೆ ತಲುಪಬೇಕು ಎಂಬ ಉದ್ದೇಶದಿಂದ ಗ್ರಾಮ ಸಂಚಾರ ನಡೆಸುತ್ತಿದ್ದು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಇದೇ ವೇಳೆ ಗ್ರಾಮಸ್ಥರಿಂದ ವಿದ್ಯುತ್, ಬಸ್ ವ್ಯವಸ್ಥೆ, ಹೊಲಗಳಿಗೆ ದಾರಿ, ಪಿಂಚಣಿ, ವಿಧವಾ ವೇತನ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಅಮಿತಕುಮಾರ ಕುಲಕರ್ಣಿ, ತಾ.ಪಂ. ಇಒ ಹಣಮಂತರಾಯ ಕೌಟಗೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಜೆಸ್ಕಾಂ ಎಇಇ ರವಿ ಕಾರಬಾರಿ, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಸುರೇಶ ಬೋಸ್ಲೆ, ಅರಹಂತ ಸಾವಳೆ, ಶಿವರಾಜ ಅಲ್ಮಾಜೆ, ಗಿರೀಶ ಒಡೆಯರ್, ಬಾಬುರಾವ ತೋರ್ಣಾವಾಡಿ, ರಾಹುಲ ಪಾಟೀಲ, ವಿಷ್ಣು, ಭರತ ಕದಂ, ಅಶೋಕ ಮೇತ್ರೆ, ಉದಯ ಸೋಲಾಪೂರೆ, ಗಜಾನಂದ ವಟಗೆ, ಪ್ರವೀಣ ಸಿಗ್ರೆ, ಶಾಂತಕುಮಾರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.