ADVERTISEMENT

ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆಗೆ ರವೀಂದ್ರ ಸ್ವಾಮಿ ಆಗ್ರಹ

ಸಂಚಾರಿ ಪಶು ಆಂಬುಲನ್ಸ್‌ ನಿರ್ವಹಣೆ ಟೆಂಡರ್‌ ಹಂಚಿಕೆಯಲ್ಲಿ ಕೋಟ್ಯಂತರ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 11:37 IST
Last Updated 22 ಫೆಬ್ರುವರಿ 2023, 11:37 IST
ಏಕತಾ ಫೌಂಡೇಷನ್ ರವೀಂದ್ರ ಸ್ವಾಮಿ
ಏಕತಾ ಫೌಂಡೇಷನ್ ರವೀಂದ್ರ ಸ್ವಾಮಿ   

ಬೀದರ್: ‘ಪಶು ಸಂಗೋಪನಾ ಇಲಾಖೆಯ ಸಂಚಾರಿ ಪಶು ಆ್ಯಂಬುಲೆನ್ಸ್‌ ನಿರ್ವಹಣೆ ಟೆಂಡರ್‌ ಅನ್ನು ಅನುಭವವಿಲ್ಲದ ‘ಎಡುಸ್ ಪಾರ್ಕ್’ ಕಂಪನಿಗೆ ವಹಿಸಿಕೊಡುವಲ್ಲಿ ₹ 200 ಕೋಟಿ ಅವ್ಯವಹಾರ ನಡೆದಿರುವ ಅನುಮಾನ ಇದೆ. ಈ ಹಗರಣ ಬಯಲಿಗೆಳೆಯಲು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ಬಿಜೆಪಿ ಮುಖಂಡ, ಏಕತಾ ಫೌಂಡೇಷನ್ ರವೀಂದ್ರ ಸ್ವಾಮಿ ಆಗ್ರಹಿಸಿದರು.


‘ಕೋಟ್ಯಂತರ ರೂಪಾಯಿ ಅವ್ಯವಹಾರದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ನೇರವಾಗಿ ಭಾಗಿಯಾಗಿರುವುದನ್ನು ತಳ್ಳಿ ಹಾಕುವಂತಿಲ್ಲ’ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪ ಮಾಡಿದರು.


‘ಕಲ್ಯಾಣ ಕರ್ನಾಟಕಕ್ಕೆ 68 ಆಂಬುಲನ್ಸ್‌ ಸೇರಿ ರಾಜ್ಯದಲ್ಲಿ ಒಟ್ಟು 290 ಸಂಚಾರಿ ಪಶು ಆಂಬುಲನ್ಸ್‌ಗಳನ್ನು ವಿತರಿಸಲಾಗಿದೆ. ಮುಂಬೈ ಮೂಲದ ‘ಎಡುಸ್ ಪಾರ್ಕ್’ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳ ತರಗತಿಗಳನ್ನು ನಡೆಸುವ ಸಂಸ್ಥೆಯಾಗಿದೆ. ನಿಯಮಾವಳಿ ಪ್ರಕಾರ ಪಶು ವೈದ್ಯಕೀಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷದ ಅನುಭವ ಇರಬೇಕು. ಪಶುಗಳ ಆಂಬುಲನ್ಸ್‌ ನಿರ್ವಹಿಸಬೇಕು. ಅಗತ್ಯ ಸಿಬ್ಬಂದಿ ಇರಬೇಕು. ಆದರೆ, ಇಲ್ಲಿ ಯಾವುದೇ ಅನುಭವ ಇಲ್ಲದ ಕಂಪನಿಗೆ ನಿರ್ವಹಣೆಯ ಹೊಣೆ ವಹಿಸಲಾಗಿದೆ’ ಎಂದು ಆರೋಪ ಮಾಡಿದರು.

ADVERTISEMENT

‘ಸರ್ಕಾರ ಟೆಂಡರ್‌ ಕರೆದಾಗ ಜಿವಿಕೆ ಎಎಂಆರ್, ಬಿವಿಕೆ, ಸುಮಿತ್‌ ಹಾಗೂ ‘ಎಡುಸ್ ಪಾರ್ಕ್’ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಜಿವಿಕೆ ಕಂಪನಿಗೆ ಎಲ್ಲ ಅರ್ಹತೆ ಇದ್ದರೂ ತಿರಸ್ಕರಿಸಲಾಗಿದೆ. ‘ಎಡುಸ್ ಪಾರ್ಕ್’ ನಿಂದ ಗುಣಮಟ್ಟದ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಂಚಾರಿ ಪಶು ಆಂಬುಲನ್ಸ್‌ ಸೇವೆಯ ಯೋಜನೆ ವಿಫಲವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಅರ್ಹ ಸೇವಾದಾರರನ್ನು ನಿಯೋಜಿಸುವಾಗ ಟೆಂಡರ್‌ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಟೆಂಡರ್‌ನಲ್ಲಿ ಭಾಗವಹಿಸಿದವರ ಅನರ್ಹತೆಯ ವಿರುದ್ಧ ವೆಬ್‌ಸೈಟ್‌ನಲ್ಲಿ ಯಾವುದೇ ಕಾರಣ ಉಲ್ಲೇಖಿಸಿಲ್ಲ. ಬೇರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ರುಜುವಾತು ಹೊಂದಿರುವ ಎನ್‌ಜಿಒಗಳನ್ನು ಪರಿಗಣಿಸಿಲ್ಲ. ಹೀಗಾಗಿ ಜಿವಿಕೆ ಕಂಪನಿ ಫೆಬ್ರುವರಿ 17ರಂದು ಹೈಕೋರ್ಟ್‌ನಲ್ಲಿ ಡಬ್ಲ್ಯೂಇಪಿ 3836/2023 ಪ್ರಕರಣ ದಾಖಲಿಸಿದೆ’ ಎಂದು ಅವರು ತಿಳಿಸಿದರು.

‘ನಾನು ಔರಾದ್‌ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದೇನೆ. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದೇನೆ. ಬಿಜೆಪಿ ವರಿಷ್ಠ ಮಂಡಳಿ ರಾಜ್ಯದ50 ಹಾಲಿ ಶಾಸಕರಿಗೆ ಟಿಕೆಟ್‌ ಕೊಡದಿರಲು ನಿರ್ಧರಿಸಿರುವ ಮಾಹಿತಿ ಇದೆ. ಅದರಲ್ಲಿ ಪ್ರಭು ಚವಾಣ್‌ ಅವರ ಹೆಸರೂ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.