ADVERTISEMENT

ವಿದ್ಯಾರ್ಥಿಗಳಿಂದ ಗ್ರಾಮ ಸ್ವರಾಜ್ಯ ಸಾಕಾರ

ಎನ್.ಎಸ್.ಎಸ್ ದಿನಾಚರಣೆಯಲ್ಲಿ ಶಿವಯ್ಯ ಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 10:41 IST
Last Updated 28 ಸೆಪ್ಟೆಂಬರ್ 2022, 10:41 IST
ಬೀದರ್‌ನ ಗುರುನಾನಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಅವರು ‘ವಸುದೈವ ಕುಟುಂಬಕಂ’ ಮಾಹಿತಿ ಪುಸ್ತಕವನ್ನು ವಿತರಿಸಿದರು
ಬೀದರ್‌ನ ಗುರುನಾನಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಅವರು ‘ವಸುದೈವ ಕುಟುಂಬಕಂ’ ಮಾಹಿತಿ ಪುಸ್ತಕವನ್ನು ವಿತರಿಸಿದರು   

ಬೀದರ್: ವಿದ್ಯಾರ್ಥಿಗಳಿಂದ ಮಹಾತ್ಮ ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಲು ಸಾಧ್ಯವಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ನಗರದ ಮನ್ನಳ್ಳಿ ರಸ್ತೆಯ ಟೀಚರ್ಸ್ ಕಾಲೊನಿಯಲ್ಲಿ ಇರುವ ಗುರುನಾನಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಶಕ್ತಿ ಅತಿ ದೊಡ್ಡ ಶಕ್ತಿಯಾಗಿದೆ. ಅದನ್ನು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ, ದೇಶ ಪ್ರೇಮ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ ಇದ್ದರೂ, ಅಂದಿನ ಕೇಂದ್ರ ಸಚಿವ ಕೆ.ವಿ. ರಾವ್ ಅವರು ರಾಷ್ಟ್ರೀಯ ಸೇವಾ ಯೋಜನೆ ಸ್ಥಾಪಿಸಿದ್ದರು. ದೇಶದಲ್ಲಿ 53 ವರ್ಷಗಳಿಂದ ಇದರ ಅಡಿಯಲ್ಲಿ ದೇಶ ಪ್ರೇಮ, ಭಾವೈಕ್ಯತೆ ಬೆಳೆಸುವ ಕಾರ್ಯಕ್ರಮ ಹಾಗೂ ಸಾಮಾಜಿಕ ಚಟುವಟಿಕೆಗಳು ನಿರಂತರ ನಡೆಯುತ್ತಿವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಎನ್.ಎಸ್.ಎಸ್ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆಗೈಯುವ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಕೇಂದ್ರ ಸರ್ಕಾರ ಯುವ ನಿಯೋಗದಲ್ಲಿ ವಿದೇಶಕ್ಕೆ ಹೋಗುವ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು.
ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಮಾತನಾಡಿ, ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ ವತಿಯಿಂದ ನಡೆಸಲಾಗುವ ಪರೀಕ್ಷೆಗಳಲ್ಲಿ ಸಾಧನೆಗೆ ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಾಮಲಾ ವಿ. ದತ್ತಾ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ರೇಣುಕಾ ತಾಂದಳೆ, ಪ್ರೀತಿಕುಮಾರಿ ಮಾತನಾಡಿದರು.
ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವತಿಯಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಪ್ರಕಟಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯ ವಸುದೈವ ಕುಟುಂಬಕಂ ಪುಸ್ತಕವನ್ನು ಎನ್.ಎಸ್.ಎಸ್. ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಅರ್ಹರಿಗೆ ಯೋಜನೆಗಳ ಮಾಹಿತಿ ಹಾಗೂ ಲಾಭ ತಲುಪಿಸಲು ಸಲಹೆ ನೀಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎಎಸ್‍ಐ ರೂಪಾ ಕಥೆರಿನೆ, ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಗೌರಮ್ಮ ಎಂ, ಉಪನ್ಯಾಸಕ ಡಾ. ಸಂಜಯ ಮೈನಳ್ಳಿ ಹಾಗೂ ಕಾಲೇಜು ಸಿಬ್ಬಂದಿ ಇದ್ದರು.
ಅಂಜಲಿ ಕುಲಕರ್ಣಿ ನಿರೂಪಿಸಿದರು. ಅಶ್ವಿನಿ ಸಂಗ್ರಾಮ ಸ್ವಾಗತಿಸಿದರು. ಐಶ್ವರ್ಯ ಬೆಳಕೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.