ADVERTISEMENT

₹ 4 ಕೋಟಿ ವೆಚ್ಚದಲ್ಲಿ ಭವನ ನವೀಕರಣ

ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 13:49 IST
Last Updated 18 ಆಗಸ್ಟ್ 2022, 13:49 IST
ಬೀದರ್‌ನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಆರೋಗ್ಯ ಇಲಾಖೆ ಲಿಪಿಕ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಬೀದರ್‌ನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಆರೋಗ್ಯ ಇಲಾಖೆ ಲಿಪಿಕ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು   

ಬೀದರ್: ₹4 ಕೋಟಿ ವೆಚ್ಚದಲ್ಲಿ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ ನವೀಕರಣದ ಮುಂದುವರಿದ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೌಕರರ ಒಂದು ದಿನದ ವೇತನದಿಂದ ₹ 3 ಕೋಟಿ ಹೊಂದಿಸಲು ಹಾಗೂ ಉಳಿದ ₹ 1 ಕೋಟಿಯನ್ನು ರಾಜ್ಯ ಸರ್ಕಾರದಿಂದ ಪಡೆಯಲು ಉದ್ದೇಶಿಸಲಾಗಿದೆ. ಮುಂದುವರಿದ ಕಾಮಗಾರಿಯು ಭವನದ ಮುಂಭಾಗದಲ್ಲಿ ಎರಡು ಅಂತಸ್ತಿನ ಕಟ್ಟಡ, 10 ಅತಿಥಿಗೃಹ, ತೆರೆದ ಸಭಾಂಗಣ, ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆ, ಅಡುಗೆ ಕೋಣೆ ಮತ್ತಿತರ ಕಾಮಗಾರಿಗಳನ್ನು ಒಳಗೊಂಡಿದೆ ಎಂದು ಹೇಳಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರಕ್ಕೆ ಸರಿಸಮಾನ ವೇತನ ನೀಡಲು ಏಳನೇ ವೇತನ ಆಯೋಗ ರಚನೆ, ಎನ್‍ಪಿಎಸ್ ರದ್ದತಿಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಕೆಜಿಐಡಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ನೌಕರರ ವೇತನ ಎಚ್‍ಆರ್‍ಎಂಎಸ್ ಮೂಲಕ ಪಾವತಿಸಲು ಬ್ರಿಮ್ಸ್ ನಿರ್ದೇಶಕರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಬರುವ ದಿನಗಳಲ್ಲಿ ಆಯಾ ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟು ನೌಕರರ ಕುಂದು ಕೊರತೆಗಳನ್ನು ಆಲಿಸಲಾಗುವುದು. ನೌಕರರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ತಮ್ಮ ಅವಧಿಯಲ್ಲಿ ನೌಕರರ ಹಿತರಕ್ಷಣೆಗೆ ಶಕ್ತಿ ಮೀರಿ ಶ್ರಮಿಸಲಾಗಿದೆ. ನೌಕರರಿಗೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ದ್ವಿತೀಯ, ಪಿಯುಸಿಯಲ್ಲಿ ಸಾಧನೆಗೈದ ಅವರ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗಿದೆ. ಗಮನ ಸೆಳೆಯುವ ರೀತಿಯಲ್ಲಿ ಭವನ ನವೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜಪ್ಪ ಪಾಟೀಲ, ಶಿವಕುಮಾರ ಘಾಟೆ, ಮಲ್ಲಿಕಾರ್ಜುನ ಮೇತ್ರೆ ಮಾತನಾಡಿದರು.
ಸಭೆಯಲ್ಲಿ ಇಮ್ಯಾನುವೆಲ್ ಭಾಸ್ಕರ್, ಗಜರಾಬಾಯಿ ಶಿವರಾಜ, ಸಂತೋಷ ಚಲುವಾ, ಪ್ರಮೋದ್ ಭೋಸ್ಲೆ ಅವರನ್ನು ಸಂಘಕ್ಕೆ ನಾಮನಿರ್ದೇಶನ ಮಾಡಲಾಯಿತು.

ಆರೋಗ್ಯ ಇಲಾಖೆ ಲಿಪಿಕ ನೌಕರರ ಸಂಘಕ್ಕೆ ಆಯ್ಕೆಯಾದರಾಜಕುಮಾರ ಬಿರಾದಾರ, ಅನುಸೂಯಾ ಮಾಡಗಿ, ಎಂ.ಎ. ಸತ್ತಾರ್, ಸಿದ್ರಾಮೇಶ ಓತಿ, ರಾಜೇಶ ಗುರು, ಗ್ರೇಸಿ, ಓಂಪ್ರಕಾಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೂರ್ಣಿಮಾ ಪಾಟೀಲ, ಚಂದ್ರಕಾಂತ ತಳವಾಡೆ, ಮಂಜುನಾಥ ಮುದ್ನಾಳ, ಅಭಿಷೇಕ, ಹಾಕಿ ಟೂರ್ನಿಯ ಬೀದರ್‍ನ ರನ್ನರ್ ಅಪ್ ತಂಡದ ಆಟಗಾರರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಜ್ಯೋತಿ ಬೆಳಗಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ವಾರ್ಷಿಕ ವರದಿ ವಾಚಿಸಿದರು.

ಪ್ರಮುಖರಾದ ಬಕ್ಕಪ್ಪ ನಿರ್ಣಾಕರ್, ಶಿವಶಂಕರ ಟೋಕರೆ, ಪಾಂಡುರಂಗ ಬೆಲ್ದಾರ್, ಶಿವರಾಜ ಕಪಲಾಪುರೆ, ಓಂಕಾರ ಮಲ್ಲಿಗೆ, ಸುಮತಿ ರುದ್ರಾ, ರೂಪಾದೇವಿ, ಸಾವಿತ್ರಮ್ಮ, ಮನೋಹರ ಕಾಶಿ, ಸುಧಾಕರ ಶೇರಿಕಾರ್, ಸಂಜೀವಕುಮಾರ ಸೂರ್ಯವಂಶಿ, ಇಮಾನ್ಯುವೆಲ್, ಸೋಹೆಲ್, ಡಿ. ರಾಜಾ ಇದ್ದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಡಾ.ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ಉಪಾಧ್ಯಕ್ಷೆ ಡಾ. ವೈಶಾಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.