ಬಸವಕಲ್ಯಾಣ: ಡಿಜಿಟಲ್ ಜನನ ಪ್ರಮಾಣ ಪತ್ರ ದೊರೆಯದ ಕಾರಣ ತೊಂದರೆ ಆಗುತ್ತಿರುವುದರಿಂದ ಶೀಘ್ರದಲ್ಲಿ ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ದತ್ತಾತ್ರಿ ಗಾದಾ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲ್ಲೂಕು ಘಟಕದಿಂದ ಸೋಮವಾರ ಮನವಿಪತ್ರ ಸಲ್ಲಿಸಲಾಗಿದೆ.
ಕೈಬರಹದ ಜನನ ಪ್ರಮಾಣ ಪತ್ರಗಳನ್ನು ಡಿಜಿಟಲೀಕರಣಕ್ಕಾಗಿ ಸರ್ಕಾರ ಆದೇಶಿಸಿದೆ. ಆದರೆ, ಇಲ್ಲಿ ಅಂಥ ವ್ಯವಸ್ಥೆ ಇಲ್ಲವಾದ್ದರಿಂದ ಕೆಲ ತಿಂಗಳಿಂದ ಜನರು ಪರದಾಡುತ್ತಿದ್ದಾರೆ. ನೀಟ್, ಸಿಇಟಿ ಮುಂತಾದ ಪ್ರವೇಶ ಪರೀಕ್ಷೆಗಳಿಗಾಗಿ ಡಿಜಿಟಲ್ ಪ್ರಮಾಣ ಪತ್ರದ ಅಗತ್ಯವಿರುತ್ತದೆ ಎಂದರು.
ಈ ಬಗ್ಗೆ ಸಂಬಂಧಿತರಿಗೆ ಹಲವಾರು ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ. ಇನ್ನು ಮುಂದಾದರೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ಹೋಬಳಿ ಕೇಂದ್ರ ಮುಡಬಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆದಿದೆ. ಈ ಕಾರಣ ಹಾರಕೂಡ ರಸ್ತೆ ಹಾಳಾಗಿದೆ. ಆದ್ದರಿಂದ ಅಂಥ ವಾಹನಗಳ ಸಂಚಾರ ತಡೆಯಬೇಕು ಎಂದು ಸಹ ಕೇಳಿಕೊಳ್ಳಲಾಯಿತು.
ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚರಣಜೀತ್ ಅಣದೂರೆ, ತಾಲ್ಲೂಕು ಅಧ್ಯಕ್ಷ ಮಹಾಂತೇಶ ಗೌರಕರ್, ಭೀಮಣ್ಣ ಬಗದೂರಿ, ಸುಧೀರ ಖೇಳಗಿ, ವಿನೋದ ರಾಯಗೋಳ, ರಾಜಕುಮಾರ ಮುಡಬಿಕರ್, ಲಿಂಗಾನಂದ, ಧಮ್ಮಾ ಗೋಡಬೋಲೆ, ಸುಮೀತ ನಿಪ್ಪಾಣಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.