ADVERTISEMENT

ಬ್ರಿಮ್ಸ್ ನಿರ್ದೇಶಕರ ನೇಮಕ ಪುನರ್ ಪರಿಶೀಲಿಸಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 15:59 IST
Last Updated 17 ಜುಲೈ 2021, 15:59 IST
ಅರವಿಂದಕುಮಾರ ಅರಳಿ
ಅರವಿಂದಕುಮಾರ ಅರಳಿ   

ಬೀದರ್: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್)ಯ ನಿರ್ದೇಶಕ ಸ್ಥಾನಕ್ಕೆ ಡಾ. ಚಂದ್ರಕಾಂತ ಚಿಲ್ಲರ್ಗಿ ಅವರನ್ನು ನೇಮಕ ಮಾಡಿರುವ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ.

ಡಾ. ಚಿಲ್ಲರ್ಗಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ 2020 ರ ಡಿಸೆಂಬರ್ 9 ರಂದು ತನಿಖೆಗಾಗಿ ಬ್ರಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಅಂದಿನ ನಿರ್ದೇಶಕ ತನಿಖೆಗೆ ಸಮಿತಿ ರಚಿಸಿದ್ದರು. ಆದರೆ, ಡಾ. ಚಿಲ್ಲರ್ಗಿ ಸಮಿತಿಯ ತನಿಖೆ ಆರಂಭವಾಗದಂತೆ ನೋಡಿಕೊಂಡಿದ್ದರು. ಕಾರಣ, ತನಿಖೆ ಸಂಬಂಧ ಸರ್ಕಾರಕ್ಕೆ ಯಾವುದೇ ವರದಿ ಹೋಗಿರಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಅವರಿಗೆ ಬರೆದ ಪತ್ರದಲ್ಲಿ ಆಪಾದಿಸಿದ್ದಾರೆ.

ಡಾ. ಚಿಲ್ಲರ್ಗಿ ಒತ್ತಡದ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ನೇಮಕ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಬ್ರಿಮ್ಸ್‍ನಲ್ಲಿ 2018-19 ರಲ್ಲಿ ನಡೆದಿದೆ ಎನ್ನಲಾದ ₹ 18 ಕೋಟಿಗೂ ಅಧಿಕ ಅವ್ಯವಹಾರದ ತನಿಖೆ ಇನ್ನೂ ಶುರುವಾಗಿಲ್ಲ. ಅದರಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಕೆಲವರನ್ನು ಮೂಲ ಸ್ಥಳಕ್ಕೆ ಕಳುಹಿಸದೆ, ಅದೇ ಸ್ಥಳದಲ್ಲಿ ಮುಂದುವರಿಸಲಾಗಿದೆ. ಇದರ ಬೆನ್ನಲ್ಲೇ ಕೋಟ್ಯಂತರ ಭ್ರಷ್ಟಾಚಾರದ ಆರೋಪ ಹೊತ್ತವರನ್ನು ಬ್ರಿಮ್ಸ್‍ಗೆ ನೇಮಕ ಮಾಡಿದ್ದು, ಸರ್ಕಾರ ಭ್ರಷ್ಟರ ಬೆನ್ನಿಗೆ ನಿಂತಿದೆಯೇ ಎನ್ನುವ ಅನುಮಾನ ಜಿಲ್ಲೆಯ ಜನರಲ್ಲಿ ಮೂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.