ADVERTISEMENT

ನೀಲಕಂಠ ಗ್ರಾಮ: ಒಂದೇ ದಿನದಲ್ಲಿ ರಸ್ತೆ ಸುಧಾರಣೆ

15 ವರ್ಷಗಳಿಂದ ಇದ್ದ ಸಮಸ್ಯೆ ಗ್ರಾಮ ಪಂಚಾಯಿತಿ ಮಧ್ಯಸ್ಥಿಕೆಯಲ್ಲಿ ಪರಿಹಾರ

ಮಾಣಿಕ ಆರ್ ಭುರೆ
Published 11 ಆಗಸ್ಟ್ 2024, 6:46 IST
Last Updated 11 ಆಗಸ್ಟ್ 2024, 6:46 IST
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಮೊದಲು ಇಕ್ಕಟ್ಟಾಗಿತ್ತಲ್ಲದೆ ಇಲ್ಲಿಂದ ನೀರು ಹರಿಯುತಿತ್ತು
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಮೊದಲು ಇಕ್ಕಟ್ಟಾಗಿತ್ತಲ್ಲದೆ ಇಲ್ಲಿಂದ ನೀರು ಹರಿಯುತಿತ್ತು   

ಬಸವಕಲ್ಯಾಣ: ತಾಲ್ಲೂಕಿನ ನೀಲಕಂಠ ಗ್ರಾಮದ ಕೆರೆ ದಂಡೆಯಿಂದ ಪ್ರತಾಪುರಕ್ಕೆ ಹೋಗುವ ರಸ್ತೆ ಸುಧಾರಣಾ ಕಾರ್ಯ ಶನಿವಾರ ಒಂದೇ ದಿನದಲ್ಲಿ ಪೂರ್ಣಗೊಂಡಿದ್ದು, 15 ವರ್ಷಗಳಿಂದ ಇದ್ದ ಸಮಸ್ಯೆ ಗ್ರಾಮ ಪಂಚಾಯಿತಿಯ ಪಿಡಿಒ ಹಾಗೂ ಸದಸ್ಯರ ಮಧ್ಯಸ್ಥಿಕೆಯಿಂದ ಬಗೆಹರಿದಿದೆ.

ನೀಲಕಂಠ ಗ್ರಾಮವು ಎತ್ತರದ ದಿಬ್ಬದ ಮೇಲಿದೆ. ಹೀಗಾಗಿ ಊರಲ್ಲಿನ ಚರಂಡಿಗಳ ನೀರು ದಿಬ್ಬ ಏರಿ ಗ್ರಾಮ ಪ್ರವೇಶಿಸುವ ಸ್ಥಳದಲ್ಲಿ ಬಂದು ಸಂಗ್ರಹಗೊಳ್ಳುತ್ತಿತ್ತು. ಇದಲ್ಲದೆ ಇಲ್ಲಿಂದ ದಕ್ಷಿಣಕ್ಕೆ ಖಾನಾಪುರದ ಕಡೆಗೆ ಹಾಗೂ ಪೂರ್ವಕ್ಕೆ ಪ್ರತಾಪುರದ ಕಡೆಗೆ ಹೋಗುವ ರಸ್ತೆಗಳಲ್ಲಿ ನೀರು ಹರಿದು ಎಲ್ಲೆಡೆ ಕೆಸರು ಆಗುತ್ತಿತ್ತು. ರಸ್ತೆ ಪಕ್ಕದ ಜಮೀನಿನವರು ಚರಂಡಿ ನಿರ್ಮಿಸಲು ಜಾಗ ನೀಡದ ಕಾರಣ ಅನೇಕ ವರ್ಷಗಳಿಂದ ಈ ಸಮಸ್ಯೆ ಬಗೆಹರಿದಿರಲಿಲ್ಲ.

ಗ್ರಾಮದಿಂದ ಕೆರೆ ದಂಡೆಯ ಮೇಲಿನಿಂದ ಪ್ರತಾಪುರಕ್ಕೆ ಹೋಗುವ ರಸ್ತೆಯಂತೂ ಯಾವಾಗಲೂ ಕೆಸರಿನಿಂದ ಕೂಡಿರುತ್ತಿತ್ತು. ಇಕ್ಕಟ್ಟಾದ ಈ ಜಾಗದಲ್ಲಿ ಸಿಸಿ ರಸ್ತೆ ನಿರ್ಮಿಸಿದ್ದರೂ ಪಕ್ಕದಲ್ಲಿ ಚರಂಡಿ ಇಲ್ಲದ್ದರಿಂದ ನೀರು ಹರಿದು ಎಲ್ಲವೂ ಹಾಳಾಗಿತ್ತು. ಹೀಗಾಗಿ ಈ ಭಾಗದಲ್ಲಿನ ಸುಮಾರು 500 ಎಕರೆ ಜಮೀನಿನ ರೈತರಿಗೆ ಎತ್ತಿನ ಬಂಡಿ, ಬೈಕ್ ಮತ್ತು ಇತರೆ ವಾಹನ ತೆಗೆದುಕೊಂಡು ಹೋಗುವುದಕ್ಕೆ ತೊಂದರೆ ಆಗುತ್ತಿತ್ತು. ಆದ್ದರಿಂದ ಬಸವಕಲ್ಯಾಣ ನಗರಕ್ಕೆ ಬಂದು ಬೇರೆ ರಸ್ತೆಯಿಂದ ಸುಮಾರು 3 ಕಿ.ಮೀ ಅಧಿಕ ದೂರ ಕ್ರಮಿಸಿ ಹೋಗುವ ಪರಿಸ್ಥಿತಿ ಇತ್ತು.

ADVERTISEMENT

ಮುಖ್ಯವೆಂದರೆ, ಶಾಸಕರು, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು. ಪ್ರಜಾವಾಣಿಯ ಕುಂದು ಕೊರತೆ ಕಾಲಂನಲ್ಲಿಯೂ ಜುಲೈ 17 ರಂದು ಈ ಬಗ್ಗೆ ಸುದ್ದಿ ಪ್ರಕಟ ಆಗಿತ್ತು. ಇದೆಲ್ಲದರ ಪರಿಣಾಮವಾಗಿ ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಾಮ ಧೂಳಖೇಡ ಅವರು ಈ ಸಮಸ್ಯೆ ಬಗೆಹರಿಸುವುದಕ್ಕಾಗಿ ಸತತವಾಗಿ ಪ್ರಯತ್ನಿಸಿದ್ದರು.

ಶನಿವಾರ ಬೆಳಿಗ್ಗೆಯಿಂದಲೇ ಪಿಡಿಒ ಅವರು ಗ್ರಾಮದಲ್ಲಿ ಠಿಕಾಣಿ ಹೂಡಿ ಪಂಚಾಯಿತಿ ಸದಸ್ಯರು, ಗ್ರಾಮದ ಪ್ರಮುಖರೊಂದಿಗೆ ಸಭೆ ಹಮ್ಮಿಕೊಂಡು ಚರ್ಚಿಸಿದರು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಂಜೆಯವರೆಗೆ ಸುಧಾರಣಾ ಕಾರ್ಯ ಪೂರ್ಣಗೊಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಮೇತ್ರೆ, ಸದಸ್ಯರಾದ ನಾಗನಾಥ ಚವಾಣ್, ವಿಜಯಕುಮಾರ ಮೇತ್ರೆ, ನವನಾಥ ರಾಠೋಡ, ವಿದ್ಯಾಸಾಗರ ಉಡಚಣ, ಇಸ್ಮಾಯಿಲ್, ಸುಭಾಷ ಕುದರೆ ಮತ್ತಿತರರು ಸ್ಥಳದಲ್ಲಿದ್ದು ಸಹಕರಿಸಿದರು.

`ತುರ್ತು ಕೆಲಸ ಇರುವುದರಿಂದ ಗ್ರಾಮ ಪಂಚಾಯಿತಿಯ ತೆರಿಗೆ ಹಣದಿಂದ 2 ಜೆಸಿಬಿ ಯಂತ್ರಗಳನ್ನು ತರಿಸಿ 3 ಕಿ.ಮೀ ಅಂತರದ ರಸ್ತೆಯನ್ನು 15 ಅಡಿ  ಅಗಲದಷ್ಟು ವಿಸ್ತರಿಸಲಾಗಿದೆ. ಎರಡೂ ಕಡೆಗಳಲ್ಲಿ ಚರಂಡಿಗಳನ್ನು ಕೊರೆದು ನೀರು ಸರಾಗವಾಗಿ ಸಾಗುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರ್ಯಕ್ಕಾಗಿ ಕೆಲ ರೈತರು ಸಹಕರಿಸಿದ್ದಾರೆ’ ಎಂದು ಪಿಡಿಒ ಚಂದ್ರಾಮ ಧೂಳಖೇಡ ಹೇಳಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಪಕ್ಕದ ಗಿಡಕಂಟೆಗಳನ್ನು ತೆಗೆದು ಎರಡೂ ಬದಿಗೆ ಶನಿವಾರ ಚರಂಡಿ ನಿರ್ಮಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಸುಧಾರಣೆಗೊಂಡಾಗ ಕಂಡಿರುವ ದೃಶ್ಯ
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆಯಲ್ಲಿ ಶನಿವಾರ ಸುಧಾರಣಾ ಕಾರ್ಯ ಆರಂಭಿಸಲಾಯಿತು. ಪಿಡಿಒ ಚಂದ್ರಾಮ ಧೂಳಖೇಡ ಮತ್ತಿತರರು ಇದ್ದರು
ಚಂದ್ರಾಮ ಧೂಳಖೇಡ
ರಸ್ತೆ ಪಕ್ಕದ ಜಮೀನಿನ ಮಾಲೀಕ ಕಾಶಿನಾಥ ಚೌಧರಿ ಅವರು ಒಪ್ಪಿದ್ದರಿಂದ ಸಮಸ್ಯೆ ಬಗೆಹರಿದಿದೆ. ಪಂಚಾಯಿತಿ ತೆರಿಗೆ ಹಣದಿಂದ ಸುಧಾರಣಾ ಕಾರ್ಯ ನಡೆದಿದೆ.
-ಚಂದ್ರಾಮ ಧೂಳಖೇಡ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.