ADVERTISEMENT

ನಿವೇಶನ ಕೊಡಲು ಸತಾಯಿಸಿದ ಇಬ್ಬರಿಗೆ ₹ 15 ಲಕ್ಷ ದಂಡ

ಸಹಕಾರ ಸಂಘದ 10 ಸದಸ್ಯರಿಗೆ ನಿವೇಶನ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 16:43 IST
Last Updated 9 ಅಕ್ಟೋಬರ್ 2019, 16:43 IST
ಬಸವಕಲ್ಯಾಣದಲ್ಲಿ ಸರ್ವೋದಯ ಗೃಹ ನಿರ್ಮಾಣ ಸಹಕಾರ ಸಂಘದ 10 ಸದಸ್ಯರಿಗೆ ನಿವೇಶನ ಸ್ವಾಧೀನಪತ್ರ ನೀಡಲಾಯಿತು
ಬಸವಕಲ್ಯಾಣದಲ್ಲಿ ಸರ್ವೋದಯ ಗೃಹ ನಿರ್ಮಾಣ ಸಹಕಾರ ಸಂಘದ 10 ಸದಸ್ಯರಿಗೆ ನಿವೇಶನ ಸ್ವಾಧೀನಪತ್ರ ನೀಡಲಾಯಿತು   

ಬೀದರ್‌: ಬಸವಕಲ್ಯಾಣದ ಸರ್ವೋದಯ ಗೃಹ ನಿರ್ಮಾಣ ಸಹಕಾರ ಸಂಘದ 10 ಸದಸ್ಯರಿಗೆ ನಿವೇಶನ ಕೊಡಲು ಸತಾಯಿಸಿದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಜಿಲ್ಲಾ ಗ್ರಾಹಕರ ವೇದಿಕೆಯು ₹ 15 ಲಕ್ಷ ದಂಡ ವಿಧಿಸಿದೆ.

ಬಸವಕಲ್ಯಾಣದ 10 ಜನರು 2005ರಲ್ಲಿ ಸರ್ವೋದಯ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯತ್ವ ಪಡೆದು ನಿವೇಶನ ಖರೀದಿಸಿದ್ದರು. ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸದಸ್ಯರಿಗೆ ನಿವೇಶನ ಹಾಗೂ ಸ್ವಾಧೀನ ಪತ್ರವನ್ನು ಕೊಟ್ಟಿರಲಿಲ್ಲ. ಹೀಗಾಗಿ ಸದಸ್ಯರು 2014ರಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.

2017ರ ಜುಲೈ 4ರಂದು ಗ್ರಾಹಕರ ವೇದಿಕೆಯು ಸಹಕಾರ ಸಂಘದ ಸದಸ್ಯರ ಪರವಾಗಿ ಆದೇಶ ನೀಡಿತ್ತು. ಇದಾದ ನಂತರವೂ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಗ್ರಾಹಕರ ವೇದಿಕೆಯ ಆದೇಶ ಪಾಲನೆ ಮಾಡಿರಲಿಲ್ಲ. ಹೀಗಾಗಿ ಸದಸ್ಯರು ಮತ್ತೆ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಇಬ್ಬರೂ ವೇದಿಕೆಯ ಮುಂದೆ ಹಾಜರಾಗಿ ನಿವೇಶನ ಹಂಚಿಕೆಗಾಗಿ ಮಧ್ಯಸ್ಥಿಕೆ ಆಯುಕ್ತರನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದರು. ವೇದಿಕೆಯು ನಗರಸಭೆ ಆಯುಕ್ತ ಹಾಗೂ ತಹಶೀಲ್ದಾರ್‌ ಅವರನ್ನು ಮಧ್ಯಸ್ಥಿಕೆ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಮಧ್ಯಸ್ಥಿಕೆ ಆಯುಕ್ತರು ಎರಡು ಕಡೆಯವರನ್ನು ಸ್ಥಳಕ್ಕೆ ಕರೆಯಿಸಿ ಸಮೀಕ್ಷೆ ನಡೆಸಿ 2019ರ ಸೆಪ್ಟೆಂಬರ್ 30ರಂದು ಸ್ವಾಧೀನಪತ್ರ ನೀಡಿದ್ದರು. ನಗರಸಭೆ ಆಯುಕ್ತರು ವೇದಿಕೆಗೂ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ.

ವೇದಿಕೆಯು ಸುದೀರ್ಘ ವಿಚಾರಣೆ ನಡೆಸಿ, 14 ವರ್ಷಗಳ ಕಾಲ ಸದಸ್ಯರಿಗೆ ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಇಬ್ಬರೂ ಸೇರಿ ಪ್ರತಿ ಸದಸ್ಯರಿಗೆ ದಂಡದ ರೂಪದಲ್ಲಿ ತಲಾ ₹ 1.50 ಲಕ್ಷ ಪಾವತಿಸಬೇಕು. ಪ್ರಕರಣದ ವೆಚ್ಚವನ್ನೂ ಭರಿಸಬೇಕು ಎಂದು ಅಕ್ಟೋಬರ್‌ 3ರಂದು ತೀರ್ಪು ನೀಡಿದೆ. ದೂರುದಾರರ ಪರವಾಗಿ ವಕೀಲ ಶಂಭುಲಿಂಗ ಸಾಲಿಮಠ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.