ಬೀದರ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು –ಸಾಂದರ್ಭಿಕ ಚಿತ್ರ
ಬೀದರ್: ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಸಮತೋಲನ’ ಯೋಜನೆ ಜಾರಿಗೊಳಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ನಾಲ್ಕು ವರ್ಷಗಳು ಕಳೆಯುತ್ತ ಬಂದರೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ.
ನಂಜುಂಡಪ್ಪ ವರದಿಯಲ್ಲಿ 114 ತಾಲ್ಲೂಕುಗಳು ಹಿಂದುಳಿದ ಪಟ್ಟಿಯಲ್ಲಿದ್ದವು. ತಾಲ್ಲೂಕುಗಳ ಪುನರ್ ರಚನೆ ನಂತರ 39 ಹೊಸ ತಾಲ್ಲೂಕುಗಳನ್ನು ಸೇರಿಸಿದ್ದರಿಂದ ಆ ಸಂಖ್ಯೆ 153 ತಾಲ್ಲೂಕುಗಳಿಗೆ ಏರಿಕೆ ಕಂಡಿತು.
ನೀರಾವರಿ, ಮೂಲಸೌಕರ್ಯ ಸೇರಿದಂತೆ ಐದು ಪ್ರಮುಖ ಆದ್ಯತಾ ವಲಯಗಳನ್ನು ಗುರುತಿಸಿ, ₹3 ಸಾವಿರ ಕೋಟಿ ತೆಗೆದಿರಿಸಲು ತೀರ್ಮಾನಕ್ಕೆ ಬರಲಾಗಿತ್ತು. ಆದರೆ, 2020–21ರಲ್ಲಿ ₹150 ಕೋಟಿಯಷ್ಟೇ ಮೀಸಲಿಡಲಾಗಿತ್ತು. ಆನಂತರ ನಡೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ನಂತರ ಈ ಕಡೆ ಗಮನಹರಿಸಲಿಲ್ಲ. ಇದರ ಪರಿಣಾಮ ‘ಸಮತೋಲನ’ ಯೋಜನೆಗೆ ಗ್ರಹಣ ಹಿಡಿದಿದೆ ಎಂದು ಉದ್ಯಮಿಗಳು, ಅಭಿವೃದ್ಧಿ ಪರ ಒಲವು ಹೊಂದಿದವರ ಆರೋಪ.
ನಂಜುಂಡಪ್ಪ ವರದಿ ಅನ್ವಯ ಬೀದರ್ ಜಿಲ್ಲೆಯಲ್ಲಿ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಮೆಡಿಕಲ್ ಕಾಲೇಜು, ತೋಟಗಾರಿಕೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಬಂದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲೂ ಸ್ವಲ್ಪ ಬದಲಾವಣೆ ಉಂಟಾಗಿದೆ. ಆದರೆ, ಸರ್ಕಾರಿ ಶಾಲೆ, ಕಾಲೇಜುಗಳ ಬಗ್ಗೆ ಇದೇ ಮಾತು ಹೇಳುವಂತಿಲ್ಲ.
ಮೂಲ ಸೌಕರ್ಯದ ವಿಷಯದಲ್ಲೂ ಜಿಲ್ಲೆ ಈಗಲೂ ಬಹಳ ಹಿಂದುಳಿದಿದೆ. ಪ್ರವಾಸೋದ್ಯಮಕ್ಕೆ ಯಥೇಚ್ಛ ಅವಕಾಶಗಳಿದ್ದರೂ ಅವುಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಯಾಗಲಿ, ಆದಾಯ ಹೆಚ್ಚಿಸುವ ಕೆಲಸಗಳು ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಈಗಲೂ ಹೇಳಿಕೊಳ್ಳುವಂತಹ ಕೈಗಾರಿಕೆಗಳಿಲ್ಲ. ಹೆಚ್ಚಿನ ಕೃಷಿ ಪ್ರದೇಶ ಮಳೆಯಾಶ್ರಿತವಾಗಿದೆ. ದೊಡ್ಡ ನೀರಾವರಿ ಯೋಜನೆಗಳು ಜಾರಿಗೆ ಬಂದಿಲ್ಲ. ತಲಾ ಆದಾಯ ರಾಜ್ಯದಲ್ಲಿಯೇ ಅತಿ ಕಡಿಮೆ ಇದೆ ಎನ್ನುತ್ತಾರೆ ವಾಣಿಜ್ಯೋದ್ಯಮಿಗಳು.
‘ನಂಜುಂಡಪ್ಪ ಅವರು ವರದಿ ಸಲ್ಲಿಸಿ 20ಕ್ಕೂ ಹೆಚ್ಚು ವರ್ಷಗಳಾಗಿವೆ. ಆದರೆ, ಪೂರ್ಣ ಪ್ರಮಾಣದಲ್ಲಿ ಅವರು ಶಿಫಾರಸು ಮಾಡಿದ ವರದಿ ಜಾರಿಗೆ ಬಂದಿಲ್ಲ. ಇದುವರೆಗೆ ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ. ಕೈಗಾರಿಕೆ ವಲಯ ಬೆಳೆದಿಲ್ಲ. ನೀರಾವರಿ ಯೋಜನೆಗಳು ಜಾರಿಗೆ ಬಂದಿಲ್ಲ. ಸಕ್ಕರೆ ಕಾರ್ಖಾನೆಗಳು ಸಂಕಷ್ಟದಲ್ಲಿವೆ. ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಈ ನಿಟ್ಟಿನಲ್ಲಿ ಗಂಭೀರವಾದ ಕೆಲಸಗಳಾಗುವ ಅಗತ್ಯವಿದೆ’ ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ‘ಪ್ರಜಾವಾಣಿ’ಗೆ ತಿಳಿಸಿದ್ಧಾರೆ.
‘ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳಷ್ಟೇ ಅಲ್ಲ, ಹಳೆಯ ತಾಲ್ಲೂಕುಗಳ ಪರಿಸ್ಥಿತಿ ಸರಿಯಿಲ್ಲ. ಕನಿಷ್ಠ ಮೂಲಸೌಕರ್ಯಗಳು ಇಲ್ಲ. ಈಗಿನ ಗತಿಯಲ್ಲಿ ಮುನ್ನಡೆದರೆ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ತಾಲ್ಲೂಕುಗಳ ನಡುವಿನ ಅಂತರ ಕಡಿಮೆಯಾಗಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು. ಈ ವಿಷಯಗಳನ್ನು ಸೋಮವಾರ ನಡೆಯಲಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಗಮನಕ್ಕೆ ತರಲಾಗುವುದು’ ಎಂದು ಹೇಳಿದ್ದಾರೆ.
ಬಹುತೇಕ ಎಲ್ಲ ವಲಯಗಳಲ್ಲಿ ಬೀದರ್ ಜಿಲ್ಲೆ ಈಗಲೂ ಬಹಳ ಹಿಂದುಳಿದಿದೆ. ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಇದ್ದೇವೆ.–ಬಿ.ಜಿ. ಶೆಟಕಾರ ಅಧ್ಯಕ್ಷ ಬೀದರ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.