ಇಸ್ಲಾಂಪುರ (ಜನವಾಡ): ಬೀದರ್ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ತಾಗಿರುವ ಹೈವೋಲ್ಟೇಜ್ ವಿದ್ಯುತ್ ತಂತಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಗ್ರಾಮಕ್ಕೆ ವಿದ್ಯುತ್ ಪೂರೈಸುವ ತಂತಿ ಶಾಲೆಯ ಮೊದಲ ಮಹಡಿಗೆ ತಾಗಿಕೊಂಡಿದ್ದರಿಂದ ಮಕ್ಕಳು ಭಯದಲ್ಲೇ ಪಾಠ-ಪ್ರವಚನ ಆಲಿಸುವಂತಾಗಿದೆ.
ಶಾಲೆಯಲ್ಲಿ ನೆಲಮಹಡಿಯಲ್ಲಿ ಮೂರು ಹಾಗೂ ಮೊದಲ ಮಹಡಿಯಲ್ಲಿ ಮೂರು ಸೇರಿ ಒಟ್ಟು ಆರು ಕೋಣೆಗಳು ಇವೆ. ಎರಡು ವರ್ಷದ ಹಿಂದೆ ಶಾಲೆಯ ಸನಿಹ ವಿದ್ಯುತ್ ಕಂಬ ಅಳವಡಿಸಿದ್ದು, ಅದರ ತಂತಿ ಕಟ್ಟಡಕ್ಕೆ ಹೊಂದಿಕೊಂಡಿದೆ. ಹೀಗಾಗಿ ಮಳೆ ಸುರಿದರೆ ಕಟ್ಟಡದಲ್ಲಿ ವಿದ್ಯುತ್ ಪ್ರವಹಿಸುವ ಭೀತಿ ಎದುರಾಗಿದೆ.
ಇನ್ನು ಮೊದಲ ಮಹಡಿಯಲ್ಲಿ ಇರುವ ಕೋಣೆಯೊಂದರ ಕಿಟಕಿಗೆ ಖಾಸಗಿ ಮನೆಗಳಿಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ತಂತಿಗಳನ್ನು ಸಹ ಕಟ್ಟಿದ್ದರಿಂದ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಆತಂಕ ಪಡುವಂತಾಗಿದೆ.
ಎರಡು ವರ್ಷದ ಹಿಂದೆ ಶಾಲೆ ಸಮೀಪ ಕಂಬ ಅಳವಡಿಸಿ, ಅದರ ಮೂಲಕ ಬೇರೆ ಕಂಬಕ್ಕೆ ಗ್ರಾಮಕ್ಕೆ ವಿದ್ಯುತ್ ಪೂರೈಸುವ ತಂತಿ ಜೋಡಣೆ ಮಾಡಲಾಗಿದೆ. ಆದರೆ, ಕಟ್ಟಡಕ್ಕೆ ತಾಗುವಂತೆ ತಂತಿ ಜೋಡಿಸಿದ್ದರಿಂದ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ಗ್ರಾಮದ ಯುವ ಮುಖಂಡ ಸಂಗಮೇಶ ಕೌಟಗೆ.
1 ರಿಂದ 5ನೇ ತರಗತಿವರೆಗೆ ಇರುವ ಶಾಲೆಯಲ್ಲಿ 19 ಮಕ್ಕಳು ಇದ್ದಾರೆ. ಇವರಲ್ಲಿ ಬಹುತೇಕ ಬಡವರ ಮಕ್ಕಳೇ ಇದ್ದಾರೆ. ಕಟ್ಟಡಕ್ಕೆ ಹೊಂದಿಕೊಂಡ ವಿದ್ಯುತ್ ತಂತಿಯ ಕಾರಣ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಸದ್ಯ ಶಾಲೆಯವರು ವಿದ್ಯುತ್ ತಂತಿಯ ಕಾರಣಕ್ಕೆ ಮೊದಲ ಮಹಡಿಯಲ್ಲಿ ಮಕ್ಕಳನ್ನು ಕೂಡಿಸುತ್ತಿಲ್ಲ ಆದರೆ, ಮಳೆ ಸುರಿದರೆ ಇಡೀ ಕಟ್ಟಡದಲ್ಲಿ ವಿದ್ಯುತ್ ಪ್ರವಹಿಸಬಹುದಾಗಿದೆ ಎಂದು ಹೇಳುತ್ತಾರೆ ಅವರು.
ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ತಂತಿಯನ್ನು ನೋಡಿಕೊಂಡು ಹೋಗಿದ್ದಾರೆ. ಆದರೆ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಮಕ್ಕಳ ಹಾಗೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಶಾಲೆಗೆ ಕಟ್ಟಡಕ್ಕೆ ವಿದ್ಯುತ್ ತಂತಿ ತಾಗದಂತೆ ಕಂಬ ಬೇರೆಡೆ ಸ್ಥಳಾಂತರಿಸಬೇಕು.-ಸಂಗಮೇಶ ಕೌಟಗೆ ಇಸ್ಲಾಂಪುರ ಗ್ರಾಮಸ್ಥ
ಹೈ ವೋಲ್ಟೇಜ್ ವಿದ್ಯುತ್ ತಂತಿ ಶಾಲಾ ಕಟ್ಟಡಕ್ಕೆ ತಾಗಿರುವುದರಿಂದ ಶಾಲೆಯ ಮೊದಲ ಮಹಡಿಯಲ್ಲಿ ಯಾವುದೇ ತರಗತಿಗಳನ್ನು ನಡೆಸುತ್ತಿಲ್ಲ.-ಪ್ರಕಾಶ್ ರೂಪನರ್ ಮುಖ್ಯಶಿಕ್ಷಕ ಇಸ್ಲಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.