
ಹುಲಸೂರ: ತಾಲ್ಲೂಕಿನ ಬೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಕಿಯನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಬುಧವಾರ ಬೆಳಿಗ್ಗೆ ಕೆಲಕಾಲ ಹುಲಸೂರು–ಬಸವಕಲ್ಯಾಣ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ವಿಜ್ಞಾನ ಶಿಕ್ಷಕಿ ಸರಿಯಾಗಿ ಪಾಠ ಮಾಡುತ್ತಿಲ್ಲ. ಪ್ರಶ್ನೆ ಕೇಳಿದರೆ ‘ಗೂಗಲ್‌ನಲ್ಲಿ ನೋಡಿ’ ಎನ್ನುತ್ತಾರೆ, ಪಾಠ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಳೆದ ಎಂಟು ದಿನಗಳಿಂದ ತರಗತಿಗಳಿಗೆ ಹಾಜರಾಗದೇ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಶಿಕ್ಷಕಿಯ ವರ್ತನೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ಬಿಇಒ, ಡಿಡಿಪಿಐ ಅವರಿಗೆ ದೂರು ಸಲ್ಲಿಸಿದ್ದರು.ಕಳೆದ ವಾರ ಡಿಡಿಪಿಐ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಲಿಖಿತ ಮಾಹಿತಿ ಸಂಗ್ರಹಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ನಿರೀಕ್ಷಿತ ಅವಧಿಯಲ್ಲಿ ಯಾವುದೇ ಆದೇಶ ಹೊರಬರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿಗಳು ರಸ್ತೆ ತಡೆಗೆ ಮುಂದಾದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹುಲಸೂರು ಪೊಲೀಸ್ ಠಾಣೆಯ ಪಿಎಸ್‌ಐ ಶಿವಪ್ಪ ಮೇಟಿ, ವೃತ್ತ ನಿರೀಕ್ಷಕ ಅಲಿಸಾಬ್ ನೇತೃತ್ವದಲ್ಲಿ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ರಸ್ತೆ ತಡೆಗೆ ಅವಕಾಶ ನೀಡದೆ ಶಾಲೆಯ ಮುಖ್ಯದ್ವಾರದ ಎದುರು ಪ್ರತಿಭಟನೆ ನಡೆಸುವಂತೆ ಸೂಚಿಸಿದರು.
ಬಳಿಕ ತಹಶೀಲ್ದಾರ್ ಶಿವಾನಂದ ಮೇತ್ರೆ, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ ಕಳಮಸೆ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಆದರೆ ‘ವಿಜ್ಞಾನ ಶಿಕ್ಷಕಿ ವರ್ಗಾವಣೆ ಆದೇಶ ಹೊರಡಿಸಿದರೆ ಮಾತ್ರ ಶಾಲೆಗೆ ಹೋಗುತ್ತೇವೆ’ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ಕೊನೆಗೆ ಡಿಡಿಪಿಐ ಅವರೊಂದಿಗೆ ನಡೆದ ಚರ್ಚೆಯ ಬಳಿಕ ತಾತ್ಕಾಲಿಕವಾಗಿ ವಿಜ್ಞಾನ ಶಿಕ್ಷಕಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಯಿತು. ಶಿಕ್ಷಕಿಯನ್ನು ತಕ್ಷಣವೇ ಶಾಲೆಯಿಂದ ತೆರಳಿಸುವಂತೆ ಸೂಚಿಸಿದ ನಂತರ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಹಿಂಪಡೆದು ತರಗತಿಗಳಿಗೆ ಹಾಜರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.