ADVERTISEMENT

ರಾಜದ್ರೋಹ ಪ್ರಕರಣ ಸಂವಿಧಾನ ವಿರೋಧಿ: ವಕೀಲರ ಸಂಘದ ಸತ್ಯ ಶೋಧನಾ ಸಮಿತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 16:10 IST
Last Updated 2 ಫೆಬ್ರುವರಿ 2020, 16:10 IST

ಬೀದರ್‌: ‘ಶಾಹೀನ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಾದಾತ್ಮಕ ನಾಟಕ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಮುಖ್ಯ ಶಿಕ್ಷಕಿ ಹಾಗೂ ಪಾಲಕಿ ವಿರುದ್ಧ ರಾಜದ್ರೋಹದ ಪ್ರಕರಣ ಧಾಖಲಿಸಿರುವುದು ಸಂವಿಧಾನ ವಿರೋಧಿ ಕ್ರಮ’ ಎಂದು ಅಖಿಲ ಭಾರತೀಯ ವಕೀಲರ ಸಂಘದ ರಾಜ್ಯ ಶಾಖೆಯ ಸತ್ಯ ಶೋಧನಾ ಸಮಿತಿ ಟೀಕಿಸಿದೆ.

‘ಜನರ ಭಾವನೆಗಳು ಕಲೆ, ಸಾಹಿತ್ಯ, ಕವಿತೆ ರೂಪದಲ್ಲಿ ಅಭಿವ್ಯಕ್ತವಾಗುತ್ತವೆ. ನಾಟಕದಂತಹ ವಿಷಯ ಮುಂದಿಟ್ಟುಕೊಂಡು ನ್ಯೂಟೌನ್‌ ಪೊಲೀಸ್ ಠಾಣೆಯ ಅಧಿಕಾರಿಗಳು ಭಾರತೀಯ ದಂಡ ಸಂಹಿತೆ 504, 505(2), 124/ಎ, 153(ಎ), ಆರ್‌/ಡಬ್ಲ್ಯೂ 34 ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಖಂಡನೀಯ’ ಎಂದು ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಯಾವುದೇ ವ್ಯಕ್ತಿ ದೂರು ಸಲ್ಲಿಸಿದಾಗ ಪೊಲೀಸ್‌ ಅಧಿಕಾರಿ ವಿವೇಚನೆ ಬಳಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ ಬಳಸಬೇಕು’ ಎಂದರು.

ADVERTISEMENT

‘ಸಮಿತಿಯು ಶಾಲಾ ಸಿಬ್ಬಂದಿ ಹಾಗೂ ಪಾಲಕರನ್ನು ಭೇಟಿ ಮಾಡಿ ಪರಿಶೀಲಿಸಿದಾಗ ರಾಜದ್ರೋಹ
ದಂತಹ ಯಾವುದೇ ಗಂಭೀರ ಪ್ರಕರಣದ ಅಂಶಗಳು ಕಂಡುಬಂದಿಲ್ಲ. ಸರ್ಕಾರದ ಕಾನೂನುಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವುದು ನ್ಯಾಯ ಶಾಸ್ತ್ರದ ಪ್ರಕಾರ ರಾಜದ್ರೋಹ ಆಗುವುದಿಲ್ಲ. ಸರ್ಕಾರ ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.