ADVERTISEMENT

ಬೀದರ್ | ಬೀದಿ ಕಾಮಣ್ಣರಿಂದ ರಕ್ಷಣೆ; ಪೊಲೀಸ್‌ರಿಗೆ ಮೊರೆ

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್‌ ವಿದ್ಯಾರ್ಥಿನಿಯರ ಒಕ್ಕೊರಲ ಮನವಿ

ಚಂದ್ರಕಾಂತ ಮಸಾನಿ
Published 4 ಫೆಬ್ರುವರಿ 2022, 19:30 IST
Last Updated 4 ಫೆಬ್ರುವರಿ 2022, 19:30 IST
ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು
ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು   

ಬೀದರ್: ಇಲ್ಲಿಯ ಓಲ್ಡ್‌ಸಿಟಿಯ ರಟಕಲ್‌ಪುರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಜಿಲ್ಲೆಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿರುವ ಸರ್ಕಾರಿ ಕಾಲೇಜು. ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿನಿಯರು ಇದೇ ಕಾಲೇಜಿಗೆ ಬರುತ್ತಾರೆ. ಆದರೆ, ಕಾಲೇಜಿಗೆ ಬರುವ ಹಾಗೂ ಕಾಲೇಜಿನಿಂದ ಮನೆಗೆ ಹೋಗುವ ವೇಳೆ ಅವರಿಗೆ ಬೀದಿ ಕಾಮಣ್ಣರ ಕಿರಿಕಿರಿ ಹೆಚ್ಚಾಗಿದೆ.

ಕಾಲೇಜು ಮಾರುಕಟ್ಟೆ ಪ್ರದೇಶದಲ್ಲೇ ಇರುವ ಕಾರಣ ಪಡ್ಡೆ ಹುಡುಗರು ಪ್ರವೇಶ ದ್ವಾರದಲ್ಲಿ ನಿಂತು ಚುಡಾಯಿಸುವುದು, ಶಿಳ್ಳೆ ಹೊಡೆಯುವುದು ಮಾಡುತ್ತಿದ್ದಾರೆ. ಕೆಲವೊಮ್ಮೆ ಕಾಗದದ ರಾಕೇಟ್‌ ಮಾಡಿ ಹುಡುಗಿಯರ ಮೇಲೆ ಬಿಸಾಡುತ್ತಿದ್ದಾರೆ. ಇದು ಅತಿಯಾದಾಗ ವಿದ್ಯಾರ್ಥಿನಿಯರು ಕಳೆದ ವರ್ಷ ಕಾಲೇಜಿನ ಪ್ರಾಚಾರ್ಯರ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು. ಪ್ರಾಚಾರ್ಯರು ಕಾಲೇಜಿನ ಬಳಿ ಕಾನ್‌ಸ್ಟೆಬಲ್‌ ನಿಯೋಜಿಸುವಂತೆ ಪೊಲೀಸರಿಗೆ ಪತ್ರವನ್ನೂ ಕೊಟ್ಟಿದರು. ಒಂದೆರಡು ದಿನ ನಿಂತ ಪೊಲೀಸರು ಮತ್ತೆ ಕಾಣಿಸಿಕೊಳ್ಳಲಿಲ್ಲ.

ಇದೀಗ ಉಪನ್ಯಾಸಕರೇ ಕಾಲೇಜಿನ ಗೇಟ್‌ ಬಳಿ ನಿಂತು ವಿದ್ಯಾರ್ಥಿನಿಯರಿಗೆ ರಕ್ಷಣೆ ಒದಗಿಸಬೇಕಾಗಿದೆ. ಈಗಂತೂ ಕೆಲ ಕಿಡಿಗೇಡಿಗಳು ಗುಂಪು ಕಟ್ಟಿಕೊಂಡು ಉಪನ್ಯಾಸಕರನ್ನೇ ಗುರಾಯಿಸಿ ನೋಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡುತ್ತಿದ್ದಾರೆ.

ADVERTISEMENT

ಚೀತಾಖಾನಾದಲ್ಲಿ ಮೊದಲಿದ್ದ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರೂ ವಿದ್ಯಾರ್ಥಿನಿಯರ ರಕ್ಷಣೆಗೆ ಪೊಲೀಸರನ್ನು ನಿಯೋಜಿಸುವಂತೆ ಮನವಿ ಮಾಡಿದ್ದರು. ಶಾಸಕ ರಹೀಂ ಖಾನ್‌ ಅವರ ಗಮನಕ್ಕೂ ತಂದಿದ್ದರು. ಆದರೆ, ಪೊಲೀಸರನ್ನು ನಿಯೋಜಿಸುವ ಕೆಲಸ ಆಗಿಲ್ಲ.

ಕಾಲೇಜಿನ ಪ್ರವೇಶ ದ್ವಾರದಲ್ಲಿ ನಿಂತು ಕೆಲ ಯುವಕರು ನಿತ್ಯ ಕೀಟಲೆ ಮಾಡುತ್ತಿದ್ದಾರೆ. ಒಮ್ಮೊಮ್ಮೆ ಕಾಲೇಜಿನ ಆವರಣದ ಒಳಗೂ ಬಂದು ನಿಲ್ಲುತ್ತಿದ್ದಾರೆ. ಇಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ನಿಯೋಜಿಸಿ ರಕ್ಷಣೆ ಒದಗಿಸಬೇಕು ಎಂದು ವಿದ್ಯಾರ್ಥಿನಿಯರು ಮನವಿ ಮಾಡುತ್ತಾರೆ.

ಕಾಲೇಜಿನಲ್ಲಿ 581 ವಿದ್ಯಾರ್ಥಿನಿಯರು
ರಟಕಲ್‌ಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂರು ವಿಭಾಗಗಳು ಇವೆ. ಕಲಾ ವಿಭಾಗದಲ್ಲಿ 293, ವಾಣಿಜ್ಯ ವಿಭಾಗದಲ್ಲಿ 78 ಹಾಗೂ ವಿಜ್ಞಾನ ವಿಭಾಗದಲ್ಲಿ 210 ವಿದ್ಯಾರ್ಥಿನಿಯರು ಸೇರಿ ಒಟ್ಟು 581 ವಿದ್ಯಾರ್ಥಿನಿಯರು ಇದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮ ಪ್ರತ್ಯೇಕವಾಗಿದೆ.

ಕಾಲೇಜಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಇದ್ದರೂ ದಾಖಲೆಗಳ ನಿರ್ವಹಣೆಗೆ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರಿಲ್ಲ. ಕಚೇರಿ ಕೆಲಸ, ಇನ್ನಿತರ ಕಾರ್ಯಕ್ಕೆ ಒಬ್ಬ ಸಿಪಾಯಿಯೂ ಇಲ್ಲ. ಈ ಕೆಲಸವನ್ನೂ ಕಾಲೇಜಿನ ಉಪನ್ಯಾಸಕರೇ ಮಾಡಬೇಕಾದ ಸ್ಥಿತಿ ಇದೆ.

ಗ್ರಂಥಾಲಯ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಇದೆ. ಕಟ್ಟಡ ಹಾಗೂ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕಾಲೇಜು ಕಟ್ಟಡ ಹಾಗೂ ಕೊಠಡಿಗಳ ಕಸಗುಡಿಸಲು ಸಹ ಸರ್ಕಾರ ‘ಡಿ’ ದರ್ಜೆ ನೌಕರರನ್ನು ನೇಮಕ ಮಾಡಿಲ್ಲ.

ಇಷ್ಟು ದೊಡ್ಡ ಕಟ್ಟಡದಲ್ಲಿ ಒಬ್ಬರೇ ಸಿಪಾಯಿ ಇದ್ದಾರೆ. ಪ್ರತಿ ತಿಂಗಳು ₹6 ಸಾವಿರ ವಿದ್ಯುತ್‌ ಬಿಲ್‌ ಬರುತ್ತಿದೆ. ಪ್ರತ್ಯೇಕ ಅನುದಾನ ಇಲ್ಲದ ಕಾರಣ ನಿರ್ವಹಣೆ ಸಮಸ್ಯೆಯಾಗುತ್ತಿದೆ.

‘ನಾನು ಈಚೆಗಷ್ಟೇ ಪ್ರಾಚಾರ್ಯ ಹುದ್ದೆಯನ್ನು ವಹಿಸಿಕೊಂಡಿದ್ದೇನೆ. ನಮ್ಮ ಕಾಲೇಜಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಕಾಲೇಜಿನಲ್ಲಿ ಮೂಲಸೌಕರ್ಯದ ಕೊರತೆ ಇಲ್ಲ. ಆದರೆ, ಕ್ಲರ್ಕ್ ಹಾಗೂ ಸಿಪಾಯಿಗಳ ಅಗತ್ಯವಿದೆ. ಈಗಾಗಲೇ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ’ ಎಂದು ಪ್ರಾಚಾರ್ಯ ವಿಜಯಕುಮಾರ ತೋರಣೆಕರ್ ಹೇಳುತ್ತಾರೆ.

‘ಕಾಲೇಜಿನಲ್ಲಿ ಗ್ರಾಮೀಣ ಹಾಗೂ ಬಡ ಕುಟುಂಬದ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ‘ಡಿ’ ದರ್ಜೆ ನೌಕರರನ್ನು ನಿಯೋಜಿಸಿ ಕಾಲೇಜು ಕಟ್ಟಡ ಹಾಗೂ ಅವರಣದಲ್ಲಿ ನೈರ್ಮಲ್ಯ ಕಾಪಾಡುವ ಅಗತ್ಯವಿದೆ. ಜಿಲ್ಲಾಡಳಿತ ಈ ದಿಸೆಯಲ್ಲಿ ಎಚ್ಚೆತ್ತು ಕೆಲಸ ಮಾಡಬೇಕು’ ಎಂದು ನಗರಸಭೆ ಮಾಜಿ ಸದಸ್ಯ ನಬಿ ಖುರೇಶಿ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.