ADVERTISEMENT

ಅಗ್ರಸ್ಥಾನದಲ್ಲಿ ಶರಣ, ದಾಸ ಸಾಹಿತ್ಯ

ವಿದ್ವಾಂಸ ವಾಸುದೇವ ಅಗ್ನಿಹೋತ್ರಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 12:57 IST
Last Updated 9 ಜನವರಿ 2021, 12:57 IST
ಬೀದರ್‌ನ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ದೇವಿದಾಸ ಜೋಶಿ ಮಾತನಾಡಿದರು
ಬೀದರ್‌ನ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ದೇವಿದಾಸ ಜೋಶಿ ಮಾತನಾಡಿದರು   

ಬೀದರ್: ‘ಶರಣ ಮತ್ತು ದಾಸ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆಗ್ರ ಸ್ಥಾನವಾಗಿದೆ. ಶರಣರು, ದಾಸರು ಧಾರ್ಮಿಕ ಮತ್ತು ತಾತ್ವಿಕ ದೃಷ್ಟಿಯಿದ ಮಾತ್ರವಲ್ಲ, ಸಾಮಾಜಿಕವಾಗಿಯೂ ತೊಡಗಿಸಿಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು’ ಎಂದು ಸೇಡಂನ ದಾಸ ಸಾಹಿತ್ಯ ವಿದ್ವಾಂಸ ವಾಸುದೇವ ಅಗ್ನಿಹೋತ್ರಿ ಹೇಳಿದರು.

ಶ್ರೀ ರಾಮದಾಸರ 79ನೇ ಆರಾಧನೆ ಪ್ರಯುಕ್ತ ನಗರದ ಕುಂಬಾರವಾಡ ರಸ್ತೆಯಲ್ಲಿರುವ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

‘ಜಗತ್ತಿನ ಚಿಂತನಶೀಲರಿಗೆ ದಾಸರು ಒಂದು ಉಪಯುಕ್ತವಾದ ಸಾಹಿತ್ಯವನ್ನು ಧಾರೆ ಎರೆದಿದ್ದಾರೆ. ಅಂತಹ ಸಾಹಿತ್ಯ ಜನಸಾಮನ್ಯರಿಗೆ ತಲುಪಿಸುತಿರುವ ಪರಿಷತ್ತಿನ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ದೇವಿದಾಸ ಜೋಶಿ ಅವರು ‘ರಾಮದಾಸರ ಜೀವನ ವೃತ್ತಾಂತ ಕುರಿತು ಮಾತನಾಡಿ, ‘ರಾಮದಸಾಸರು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜೋಳದಹೆಡಿಗೆ ಗ್ರಾಮದಲ್ಲಿ ಪಿಂಜಾರ ಕುಟುಂಬದ ಖಾಜಾಸಾಹೇಬ ಪೀರಮ್ಮ ದಂಪತಿಯ ಹಿರಿಯ ಮಗ. ಇವರು ಬಾಲ್ಯದಿಂದಲೇ ಧರ್ಮ ಸಹಿಷ್ಣುಯಾಗಿದ್ದು, ಸರ್ವ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದರು’ ಎಂದರು.

‘ಸಮಾಜದಿಂದ ಬಂದ ನಿಂದನೆ ಮತ್ತು ಅಪಹಾಸ್ಯದಿಂದ ಬೇಸತ್ತು. ಶ್ರೀರಾಮ ಅಂಕಿತದೊಂದಿಗೆ ಶ್ರೀರಾಮದಾಸರಾಗಿ ಸಮಾಜಕ್ಕೆ ಜ್ಞಾನೋಕ್ತಿಯನ್ನು ದಯಪಾಲಿಸಿ, ಲಿಂಗದಳ್ಳಿ ಗ್ರಾಮದಲ್ಲಿ ಶ್ರೀರಾಮನಲ್ಲಿ ಐಕ್ಯರಾದರು, ಎಂದು ವಿವರಿಸಿದರು.

ಸಾಹಿತಿ ಶಿವಲಿಂಗ ಹೇಡೆ ಮಾತನಾಡಿ, ‘ರಾಮದಾಸರ ಕೀರ್ತನೆಗಳು ಸಮಾಜದಲ್ಲಿನ ಸಮಸ್ಯೆಗಳನ್ನು ಸಶಕ್ತವಾಗಿ ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಅವರು ಸಮಾಜದಲ್ಲಿನ ಅಂಕು ಡೊಂಕುಗಳನ್ನು ನಿರ್ಭಿಡೆಯಾಗಿ ಎತ್ತಿ ತೋರಿಸಿ ಸಮಾಜವನ್ನು ಸನ್ಮಾರ್ಗದತ್ತ ಕೊಂಡೋಯ್ಯಲು ಪ್ರಯತ್ನಿಸಿದರು’ ಎಂದು ತಿಳಿಸಿದರು.

‘ರಾಮದಾಸರ ಕೀರ್ತನೆಗಳಲ್ಲಿ ಸಾಮಾಜಿಕ ವಿಡಂಬನೆ, ಸ್ತ್ರೀ ಸಮಾನತೆ, ಪರಿಶುದ್ಧ ಭಕ್ತಿ, ಪ್ರಸ್ತಾಪಿಸುತ್ತ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದರು’ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲ ರಾಮರಾವ್ ಗಂಗನಪಳ್ಳಿ ಮಾತನಾಡಿ, ‘ವೈಚಾರಿಕತೆಯ ಭರದಲ್ಲಿ ಜೀವನ ಮೌಲ್ಯ ಮತ್ತು ಸಂಸ್ಕಾರವನ್ನು ಕಳೆದುಕೊಳ್ಳುತ್ತಿರುವ ಸಮಾಜದಲ್ಲಿ ಭಕ್ತಿ ಪಂಥದ ಸಾಹಿತ್ಯ ದಿವ್ಯಾಮೃತವಾಗಿದೆ. ದ್ವೈತ-ಅದ್ವೈತ-ವಿಶಿಷ್ಠಾದ್ವೈತ ಸಿದ್ಧಾಂತದಡಿ ರಚನೆಗೊಂಡ ಭಕ್ತಿ ಸಾಹಿತ್ಯ ಜನರಲ್ಲಿ ದೈವಭಕ್ತಿ ಮೂಡಿಸುವುದರೊಂದಿಗೆ ಅಂತರಂಗದ ಕದ ತೆರೆಯಿಸಿ ಸಜ್ಜನರಾಗಿ ಜೀವನ ನಡೆಸಲು ಪ್ರೇರೇಪಿಸುತ್ತದೆ’ ಎಂದರು.

ಅಖಿಲ ಭರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಂದ್ರ ಲಂಜವಾಡಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ದಾಸರು ನಿರ್ಮಲ ಭಕ್ತಿ ಜತೆಗೆ ಜನರ ಬದುಕಿಗೆ ಅಗತ್ಯವಿರುವ ಜೀವನ ಮೌಲ್ಯ ಸಾಮರಸ್ಯ ಮತ್ತು ಸಹಬಾಳ್ವೆಯ ಸಂದೇಶವನ್ನು ನೀಡಿದ್ದಾರೆ. ಹರಿದಾಸರು ಭಕ್ತಿಗೆ ಕೊಟ್ಟಂತೆ ಮಹತ್ವ ಬದುಕಿಗೂ ನೀಡಿದ್ದಾರೆ. ಅವರ ಮೌಲ್ಯಯುತ ಸಾಹಿತ್ಯವನ್ನು ಜನರ ಮನ ಮನೆಗಳಿಗೆ ತಲುಪಿಸುವ ಕಾರ್ಯ ನಿರಂತರ ನಡೆಸಲಾಗುವುದು’ ಎಂದರು.

ಡಾ.ರಾಮಚಂದ್ರ ದಾಸ ಹಾಗೂ ಶ್ರೀ ಸಂಪ್ರದಾಯ ಸೇವಾ ಸಮಿತಿಯ ನಿರೀಕ್ಷಕ ಪಾಂಚಾಳ ದೀಲಿಪಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದರು. ವೈಜಿನಾಥ ಬಾಬಶೆಟ್ಟಿ, ಸೃಜನ್ಯ ಅತಿವಾಳೆ, ಭವಾನಿ ಪಾಂಚಾಳ ಅವರಿಂದ ಕೀರ್ತನ ಗಾಯನ ನಡೆಯಿತು. ಮೆಹಬೂಬ್ ನಿರೂಪಣೆ ಮಾಡಿದರು. ರಾಮಶೆಟ್ಟಿ ಐನೋಳೆ ಸ್ವಾಗತಿಸಿದರು. ಶಿವಶರಣ ಜಾಪಾಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.