ಬಸವಕಲ್ಯಾಣ: ‘ಸಮೃದ್ಧಿಯಿಂದ ಕೂಡಿದ್ದ ವಿಜಯನಗರ ಸಾಮ್ರಾಜ್ಯ ಲಿಂಗಾಯತರದ್ದಾಗಿತ್ತು. 12 ಜನ ಲಿಂಗಾಯತ ಅರಸರು ಆಳ್ವಿಕೆ ನಡೆಸಿದರು’ ಎಂದು ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ಹೇಳಿದ್ದಾರೆ.
ನಗರದ ಹರಳಯ್ಯ ಗವಿಯಲ್ಲಿ ಸೋಮವಾರ ನಡೆದ ನಾಡಹಬ್ಬ ಶರಣ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ‘12ನೇ ಶತಮಾನದ ಬಸವಯುಗ ಮತ್ತು ವಿಜಯನಗರ ಸಾಮ್ರಾಜ್ಯದ ಕಾಲ ಇತಿಹಾಸದಲ್ಲಿ ಸುವರ್ಣಯುಗದ ಹೆಸರಲ್ಲಿ ನಮೂದಾಗಿದೆ. ಆದರೆ, ವಿಜಯನಗರದಲ್ಲಿ ಲಿಂಗಾಯತ ಅರಸರಿದ್ದರು. ಉತ್ತಮ ಆಡಳಿತ ನೀಡಿದ್ದರು ಎಂಬುದೇ ಎಲ್ಲರಿಗೂ ಮರೆತುಹೋಗಿದೆ. ವಿಜಯನಗರ ಅರಸರು ಬಸವಣ್ಣನವರ ಸಂಪ್ರದಾಯವನ್ನು ಮುಂದುವರಿಸಿದರು. ಲಿಂಗಾಯತ ಧರ್ಮ ಪುನರುಜ್ಜೀವನಗೊಂಡಿತು. ಬಸವಪುರಾಣ ಈ ಕಾಲದಲ್ಲೇ ಕನ್ನಡಕ್ಕೆ ಅನುವಾದಗೊಂಡಿತು’ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ‘ಧರ್ಮ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಬಸವಣ್ಣನವರು ಸಾರಿದ ಕಾಯಕ, ದಾಸೋಹ ತತ್ವ ಸಮಾನತೆಯ ಸಂದೇಶವನ್ನು ಎಲ್ಲರೂ ಪಾಲಿಸಬೇಕು’ ಎಂದು ಹೇಳಿದರು.
ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ‘ಎಲ್ಲರೂ ಇಷ್ಟಲಿಂಗ ಧರಿಸುವ ಪರಿಪಾಠ ಬೆಳೆಸಿಕೊಂಡರೆ ಮಾತ್ರ ಲಿಂಗಾಯತ ಧರ್ಮ ಉಳಿಯುತ್ತದೆ’ ಎಂದರು. ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ, ಮಲ್ಲಿಕಾರ್ಜುನ ಗುಂಗೆ, ಹಣಮಂತ ಧನಶೆಟ್ಟಿ, ಶಕುಂತಲಾ ಖಂಡಾಳೆ ಮಾತನಾಡಿದರು.
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಶಿವಶಂಕರ ಟೋಕರೆ, ಸುಭಾಷ ಹೊಳಕುಂದೆ, ವೀರಣ್ಣ ಹಲಶೆಟ್ಟಿ, ನೀಲಕಂಠಪ್ಪ ಮುನ್ನೋಳಿ, ಅಶೋಕ ನಾಗರಾಳೆ, ಸಂಜೀವಕುಮಾರ ದೇಗಲೂರೆ, ಕುಲದೀಪ ಹೇಮಾ, ಸಂಪತ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.